International

ದೋಹಾಗೆ ಹೊರಟಿದ್ದ ವಿಮಾನದಲ್ಲಿ ಹೊಗೆ; ಕರಾಚಿಯಲ್ಲಿ ತುರ್ತು ಭೂಸ್ಪರ್ಶ

ನವದೆಹಲಿ: ದೆಹಲಿಯಿಂದ ದೋಹಾಗೆ ಹೊರಟಿದ್ದ ಕತಾರ್‌ ಪ್ಯಾಸೆಂಜರ್‌ ವಿಮಾನದಲ್ಲಿ ದಿಢೀರ್‌ ಅಂತ ಹೊಗೆ ಕಾಣಿಸಿಕೊಂಡಿದ್ದು, ಪಾಕಿಸ್ತಾನದ ಕರಾಚಿಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಕತಾರ್‌ ವಿಮಾನ ಕರಾಚಿಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿದಿದ್ದು, ಪ್ರಯಾಣಿಕರೆಲ್ಲಾ ಸುರಕ್ಷಿತವಾಗಿದ್ದಾರೆ. 

  ಇಂದು ಬೆಳಗಿನ ಜಾವ 3:50ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಕತಾರ್‌ ವಿಮಾನ ಟೇಕಾಫ್‌ ಆಗಿತ್ತು. ಬೆಳಗ್ಗೆ 5:30ರ ವೇಳೆ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಕೂಡಲೇ ಎಚ್ಚೆತ್ತ ಪೈಲಟ್‌, ಪಾಕಿಸ್ತಾನದ ಕರಾಚಿಯಲ್ಲಿ ವಿಮಾನವನ್ನು ಲ್ಯಾಂಡ್‌ ಮಾಡಿದ್ದಾರೆ.

ಹೊಗೆ ಕಾಣಿಸಿಕೊಂಡಿದ್ದರಿಂದಾಗಿ ಪ್ರಯಾಣಿಕರು ಗಾಬರಿಗೊಂಡಿದ್ದರು. ಸುಮಾರು 100 ಮಂದಿ ಪ್ರಯಾಣಿಕರು ಕತಾರ್‌ ವಿಮಾನದಲ್ಲಿ ದೋಹಾಗೆ ಪ್ರಯಾಣಿಸುತ್ತಿದ್ದಾರೆ. ವಿಮಾನದಿಂದ ಪ್ರಯಾಣಿಕರನ್ನು ಸುರಕ್ಷಿತವಾಗಿ ಇಳಿಸಿದ ನಂತರ, ಅವರನ್ನು ಪ್ರತ್ಯೇಕ ವಿಮಾನದಲ್ಲಿ ದೋಹಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಯಿತು.

   ದೋಹದಿಂದ ಬೇರೆ ಕಡೆಗೆ ತೆರಳಲು ಅಲ್ಲಿಂದ ವಿಮಾನ ಟಿಕೆಟ್‌ ಪಡೆಯಲಾಗಿತ್ತು. ಆದರೆ, ಈ ವಿಮಾನ ಕರಾಚಿಯಿಂದ ಯಾವಾಗ ಟೇಕ್‌ ಆಫ್‌ ಆಗುತ್ತೆ ಎಂಬುದರ ಕುರಿತು ಯಾವೊಬ್ಬ ಅಧಿಕಾರಿಯೂ ಮಾಹಿತಿ ನೀಡುತ್ತಿಲ್ಲ ಎಂದು ಪ್ರಯಾಣಿಕರೊಬ್ಬರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.

Share Post