ದೇಶಾದ್ಯಂತ ಹೋಳಿ ಹುಣ್ಣಿಮೆ ಸಂಭ್ರಮ: ನೈಸರ್ಗಿಕ ಬಣ್ಣಗಳಿಂದ ತುಂಬಿರಲಿ ಬದುಕು
ಬೆಂಗಳೂರು: ದೇಶಾದ್ಯಂತ ಹೋಳಿ ಸಂಭ್ರಮ ಜೋರಾಗಿದೆ. ಚಿಕ್ಕಮಕ್ಕಳು, ದೊಡ್ಡವರು ಎಂಬ ಬೇಧವಿಲ್ಲದೆ ಬಣ್ಣ ಎರಚುತ್ತಾ.. ಹೋಳಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾರೆ. ವಿವಿಧ ಬಣ್ಣಗಳನ್ನು ಎರಚುತ್ತಾ ಸಂಭ್ರಮ ಸಡಗರದಿಂದ ಈ ಹಬ್ಬವನ್ನು ಆಚರಣೆ ಮಾಡ್ತಾರೆ. ಈ ಓಕುಳಿ ಹಬ್ಬವನ್ನು ಪಾಲ್ಗುಣ ಮಾಸದ ಶುದ್ಧ ಹುಣ್ಣಿಮೆ ಅಂದರೆ ಚಾಂದ್ರಮಾನ ಪಂಚಾಂಗದ ಪ್ರಕಾರ ವರ್ಷದ ಕೊನೆಯ ಹುಣ್ಣಿಮೆ. ಇದನ್ನು ಹೋಳಿ ಹುಣ್ಣಿಮೆ ಎಂದು ಕರೆಯಲಾಗುತ್ತದೆ. ಈ ಹಬ್ಬವು ವಸಂತ ಮಾಸವನ್ನು ಸ್ವಾಗತಿಸುವುದಷ್ಟೇ ಅಲ್ಲ ಏಕತೆಯನ್ನು ಬಿಂಬಿಸಿ ಹೊಸದನ್ನು ಸ್ವಾಗತಿಸುವ ಹಬ್ಬ. ಬಣ್ಣಗಳನ್ನು ಎರೆಚಾಡಿ ಸಂಭ್ರಮಿಸುವುದಕ್ಕಷ್ಟೇ ಈ ಹಬ್ಬವು ಸೀಮಿತವಾಗಿಲ್ಲ. ಬಡವ-ಬಲ್ಲಿದ, ಜಾತಿ ಧರ್ಮದ ಎಲ್ಲೆಯನ್ನು ಮೀರಿ ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತಾತ್ವಿಕ ನಿಲುವನ್ನು ಅಕ್ಷರಶಃ ಆಚರಣೆಗೆ ತರುವುದೇ ಈ ಹೋಳಿ ಹುಣ್ಣಿಮೆ.
ಓಕುಳಿ ಹಬ್ಬದ ದಂತ ಕತೆ
ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡುತ್ತಾರೆ. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣ. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಫಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡುತ್ತಾನೆ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾಗುತ್ತಾನೆ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ಆರೋಗ್ಯವೂ ಮುಖ್ಯ
ದಂತ ಕತೆ ಏನೇ ಇರಲಿ ಹೋಳಿ ಆಡಲು ಬಳಸುವ ಬಣ್ಣಗಳು ನೈದರ್ಗಿಕತೆಯಿಂದ ಕೂಡಿದ್ದಲ್ಲ. ಹಾಗಾಗಿ ಈ ಬಗ್ಗೆ ವೈದ್ಯರು ಕೆಲವು ಎಚ್ಚರಿಕೆಗಳನ್ನು ಸಹ ನೀಡಿದ್ದಾರೆ. ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಬಣ್ಣಗಳ ಬಗ್ಗೆ ಎಚ್ಚರಿಕೆ ಇರಲಿ ಎನ್ನುತ್ತಾರೆ ವೈದ್ಯರು ಹಾಗೂ ತಜ್ಞರು. ಬಣ್ಣವು ಮೈಮೇಲೆ ಎರಚುವಾಗ ಎಲ್ಲರಿಗೂ ಖುಷಿ ಅಷ್ಟೇ ಕಾಣುತ್ತದೆ. ನಂತರ ಚರ್ಮಕ್ಕೆ ಸಂಬಂಧಿಸಿದ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ನೈಸರ್ಗಿಕ ಬಣ್ಣಗಳ ಬಳಕೆಯು ಸೋಂಕುಗಳನ್ನು ನಿಯಂತ್ರಿಸುತ್ತದೆ. ರಾಸಾಯನಿಕ ಬಣ್ಣಗಳು ಹಾನಿಕಾರಕ ಪರಿಣಾಮವನ್ನು ಬೀರುತ್ತವೆ. ಮೂತ್ರನಾಳದ ಸೋಂಕುಗಳು, ಚರ್ಮ ರೋಗಗಳು, ಅಲರ್ಜಿ ಇತ್ಯಾದಿ ರೋಗಗಳು ಹರಡುತ್ತವೆ. ಈ ಬಣ್ಣಗಳು ಕೇವಲ ಮನುಷ್ಯರಿಗಷ್ಟೇ ಅಲ್ಲ ಪರಿಸರಕ್ಕೂ ಕೂಡ ಹಾನಿ. ಪರಿಸರಕ್ಕೆ ಹಾನಿಯಾಗದಂತೆ ಹೋಳಿ ಆಚರಿಸುವುದು ಎಲ್ಲರ ಕರ್ತವ್ಯ.
ರಾಸಾಯನಿಕ ಬಣ್ಣಗಳು ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ ಕೂಡಲೇ ತೆಂಗಿನಎಣ್ಣೆ ಅಥವಾ ಬಾದಾಮಿ ಎಣ್ಣೆಯನ್ನು ಕೂದಲಿಗೆ ಹಚ್ಚಿದ್ರೆ ಒಳ್ಳೆಯದು. ಒಂದಿಷ್ಟು ಮುಂಜಾಗ್ರತೆ ವಹಿಸಿ ಹೋಳಿ ಹಬ್ಬವನ್ನು ಸಂತಸದಿಂದ ಆಚರಿಸಿದ್ರೆ ಒಳ್ಳೆಯದು.