ಇಂದು ಹಿಜಾಬ್ ತೀರ್ಪು; ಹೈಕೋರ್ಟ್ ಕಲಾಪ ಆರಂಭ
ಹಿಜಾಬ್ ಪ್ರಕರಣದ ತೀರ್ಪು ಇಂದು ಪ್ರಕಟವಾಗಲಿದೆ. ಈಗಾಗಲೇ ಕೋರ್ಟ್ ಕಲಾಪ ಆರಂಭವಾಗಿದ್ದು, ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟವಾಗಲಿದೆ. ಈಗಾಗಲೇ ಮುಖ್ಯನ್ಯಾಯಮೂರ್ತಿಗಳು ತೀರ್ಪಿನ ಪುಟಗಳಿಗೆ ಸಹಿ ಹಾಕಿದ್ದು, ಕೆಲವೇ ಕ್ಷಣಗಳಲ್ಲಿ ತೀರ್ಪು ಪ್ರಕಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸುತ್ತಮುತ್ತ ಹಾಗೂ ಬೆಂಗಳೂರಿನಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ನಗರದಾದ್ಯಂತ 10,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಭದ್ರತೆಗಾಗಿ ಇಬ್ಬರು ಹೆಚ್ಚುವರಿ ಪೊಲೀಸ್ ಆಯುಕ್ತರನ್ನು ಸಹ ನೇಮಿಸಲಾಗಿದೆ. 8 ಡಿಸಿಪಿಗಳು, 40 ಎಸಿಪಿಗಳು, 120 ಇನ್ಸ್‌ಪೆಕ್ಟರ್‌ಗಳು, 40 ಕೆಎಸ್‌ಆರ್‌ಪಿ, 30 ಸಿಎಆರ್ ತುಕಡಿ ನಿಯೋಜನೆ ಮಾಡಲಾಗಿದೆ. ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದ್ದು, ಮೂವರು ಎಸಿಪಿಗಳು, 8 ಇನ್ಸ್‌ಪೆಕ್ಟರ್‌ಗಳನ್ನು ಹೈಕೋರ್ಟ್ ಬಳಿ ನಿಯೋಜಿಸಲಾಗಿದೆ.
ವಿವಿಧ ಜಿಲ್ಲೆಗಳಲ್ಲಿ ಸೆಕ್ಷನ್ ಜಾರಿ
ಮೈಸೂರು, ಕೊಪ್ಪಳ, ಕೋಲಾರ, ರಾಯಚೂರು, ರಾಮನಗರ, ದಾವಣಗೆರೆ, ಚಿಕ್ಕಬಳ್ಳಾಪುರ, ಮಂಗಳೂರು, ಬಾಗಲಕೋಟೆ, ಬೆಳಗಾವಿ, ಮಡಿಕೇರಿ, ವಿಜಯಪುರ, ಯಾದಗಿರಿ, ಕಾರವಾರ, ಹುಬ್ಬಳ್ಳಿ, ಚಿತ್ರದುರ್ಗ, ತುಮಕೂರು, ಗದಗ, ಬೀದರ್, ರಾಮನಗರ ಸಹಿತ ಮುಂತಾದೆಡೆ ಸೆಕ್ಷನ್ ಜಾರಿ ಮಾಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ 1, 2 ಹಾಗೂ ಕೆಲವೆಡೆ 6 ದಿನಗಳ ಕಾಲ ಸೆಕ್ಷನ್ ಜಾರಿಗೊಳಿಸಲಾಗಿದೆ. ಮಂಗಳೂರು, ಉಡುಪಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.