ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ವಿಜಯೋತ್ಸವ ಆಚರಣೆಗೆ ಸಿಇಸಿ ಗ್ರೀನ್ ಸಿಗ್ನಲ್
ದೆಹಲಿ: ದೇಶದಾದ್ಯಂತ ಐದು ಪ್ರತಿಷ್ಠಿತ ರಾಜ್ಯಗಳ ಚುನಾವಣೆಗೆ ಸಂಬಂಧಿಸಿದಂತೆ ಮಾರ್ಚ್ 10 ರಂದು (ಇಂದು) ಚುನಾವಣೆಯ ಫಲಿತಾಂಶಗಳನ್ನು ಬಿಡುಗಡೆ ಮಾಡಲಾಗಿದೆ. ಮತ ಎಣಿಕೆಯಲ್ಲಿ ಯುಪಿಯಲ್ಲಿ ಬಿಜೆಪಿ ಹವಾ ಮುಂದುವರಿದಿದೆ. ಈಗಾಗಲೇ ಬಿಜೆಪಿ ಮ್ಯಾಜಿಕ್ ಫಿಗರ್ ಕೂಡ ದಾಟಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸುತ್ತಿದ್ದಾರೆ. ಚುನಾವಣೆ ನಡೆದ ರಾಜ್ಯಗಳಲ್ಲದೇ ಬಿಜೆಪಿಯೇತರ ರಾಜ್ಯಗಳಲ್ಲಿಯೂ ಕಮಲ ಹಬ್ಬ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಚುನಾವಣಾ ಆಯೋಗ ಗುರುವಾರ (ಮಾರ್ಚ್ 10) ಚುನಾವಣಾ ವಿಜಯೋತ್ಸವ ಮೆರವಣಿಗೆಗಳ ಮೇಲಿನ ನಿಷೇಧವನ್ನು ಹಿಂಪಡೆದಿರುವುದಾಗಿ ಪ್ರಕಟಿಸಿದೆ.
ಚುನಾವಣೆಯಲ್ಲಿ ಗೆದ್ದ ರಾಜಕೀಯ ಪಕ್ಷಗಳಿಗೆ ವಿಜಯೋತ್ಸವ ನಡೆಸಲು ಅವಕಾಶ ಕಲ್ಪಿಸಿದೆ. ಜನವರಿ 8 ರಂದು ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಬಿಡುಗಡೆಯಾಗಿದಾಗ ಚುನಾವಣಾ ಆಯೋಗವು ಕೋವಿಡ್ -19 ಹರಡುವಿಕೆಯಿಂದ ಕೆಲವು ನಿರ್ಬಂಧಗಳನ್ನು ವಿಧಿಸಿತ್ತು. ರಾಜಕೀಯ ಪಕ್ಷಗಳು ರಾಜಕೀಯ ರ್ಯಾಲಿಗಳು ಮತ್ತು ರಸ್ತೆಗಳಲ್ಲಿ ರೋಡ್ ಶೋ ನಡೆಸುವುದನ್ನು ಚುನಾವಣಾ ಆಯೋಗ ನಿಷೇಧಿಸಿ, ರಸ್ತೆಗಳಲ್ಲಿ ಸಾರ್ವಜನಿಕ ಸಭೆಗಳ ಬದಲಿಗೆ ವರ್ಚುವಲ್ ರ್ಯಾಲಿಗಳನ್ನು ನಡೆಸಲು ಸೂಚನೆ ನೀಡಲಾಗಿತ್ತು.
ಇದೀಗ ವಿಜಯೋತ್ಸವದ ಮೆರವಣಿಗೆಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ, ಮಣಿಪುರ ಮತ್ತು ಪಂಜಾಬ್‌ನ ಮತ ಎಣಿಕೆ ಸಂದರ್ಭದಲ್ಲಿ ಸಿಇಸಿ ಈ ಘೋಷಣೆ ಮಾಡಿದೆ. ಐದು ರಾಜ್ಯಗಳ ಪೈಕಿ ನಾಲ್ಕರಲ್ಲಿ ಬಿಜೆಪಿ ಮುನ್ನಡೆಯಲ್ಲಿದೆ.