CrimeInternational

ಪಾಕಿಸ್ತಾನ ಮಸೀದಿ ಬಾಂಬ್‌ ಪ್ರಕರಣ ಸಾವಿನ ಸಂಖ್ಯೆ 57ಕ್ಕೆ ಏರಿಕೆ-ದಾಳಿಯನ್ನು ಖಂಡಿಸಿದ ವಿಶ್ವಸಂಸ್ಥೆ ಮುಖ್ಯಸ್ಥ

ಪೇಶಾವರ:  ಪ್ರಾರ್ಥನಾ ಸಮಯದಲ್ಲಿ ಮಸೀದಿಯಲ್ಲಿ ಬಾಂಬ್‌ ಸ್ಫೋಟಗೊಂಡು ಸಾವನ್ನಪ್ಪಿದವರ ಸಂಖ್ಯೆ 57ಕ್ಕೆ ಏರಿಕೆಯಾಗಿದೆ. ಇಸ್ಲಾಮಿಕ್‌ ಸ್ಟೇಟ್ಸ್‌ ದಾಳಿಯ ಹೊಣೆ ಹೊತ್ತುಕೊಂಡಿದೆ.  ಪಾಕಿಸ್ತಾನದ ಪೇಶಾವರದಲ್ಲಿ ನಡೆದ ಈ ಆತ್ಮಹತ್ಯಾ ಸ್ಪೋಟದಲ್ಲಿ 200ಕ್ಕೂ ಹೆಚ್ಚು ಜನರಿಗೆ ಗಂಭೀಯ ಗಾಯಗಳಾಗಿದ್ದು, ಆಸ್ಪತ್ರೆಗೆ ಸಾಗಿಸಲಾಗ್ತಿದೆ ಎಂದು ಪಾಕ್‌ ಮಾಧ್ಯಮವೊಂದು ವರದಿ ಮಾಡಿದೆ.

ಪಾಕಿಸ್ತಾನ್‌ನ ಪೇಶಾವರದ ಕ್ವಿಸ್ಸಾ ಖ್ವಾನಿ ಬಜಾರ್ ಪ್ರದೇಶದ ಜಾಮಿಯಾ ಮಸೀದಿಯಲ್ಲಿ ಭಕ್ತರು ಶುಕ್ರವಾರ ಪ್ರಾರ್ಥನೆ ಸಲ್ಲಿಸುತ್ತಿದ್ದ ವೇಳೆ ಸ್ಫೋಟ ಸಂಭವಿಸಿದೆ ಎಂದು ರಕ್ಷಣಾ ಅಧಿಕಾರಿಯೊಬ್ಬರು ತಿಳಿಸಿದ್ರು. ನಿನ್ನೆ 30 ಜನರು ಸಾವನ್ನಪ್ಪಿದ್ರು, ಇಂದು ಸಾವಿನ ಸಂಖ್ಯೆ ಹೆಚ್ಚಳವಾಗಿದೆ.

ಸ್ಫೋಟದ ಹೊಣೆಯನ್ನು ಇಸ್ಲಾಮಿಕ್‌ ಸ್ಟೇಟ್ಸ್ ಭಯೋತ್ಪಾದಕ ಗುಂಪು ಹೊತ್ತಿಕೊಂಡಿರುವುದಾಗಿ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಗಾಯಗೊಂಡಿರುವ 200 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.

ಇಬ್ಬರು ದಾಳಿಕೋರರು ಮಸೀದಿಗೆ ಪ್ರವೇಶಿಸಲು ಪ್ರಯತ್ನಿಸಿದರು ಈ ವೇಳೆ ಮಸೀದಿ ಬಳಿ ಕಾವಲು ನಿಂತ ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ರು  ಎಂದು ಪೇಶಾವರ್ ನಗರ ಪೊಲೀಸ್ ಆಯುಕ್ತ ಇಜಾಜ್ ಅಹ್ಸಾನ್ ಹೇಳಿದ್ದಾರೆ. ಈ ವೇಳೆ ಓರ್ವ ಪೊಲೀಸ್‌ ಅಧಿಕಾರಿ ಸಾವನ್ನಪ್ಪಿದ್ದು, ಮತ್ತೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆಂದು ತಿಳಿಸಿದ್ದಾರೆ. ಗುಂಡಿನ ದಾಳಿಯ ನಂತರ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ.

ಈ ಬಗ್ಗೆ ವಿಶ್ವಸಂಸ್ಥೆ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರಸ್ ಆತ್ಮಹತ್ಯಾ ಸ್ಫೋಟವನ್ನು ತೀವ್ರವಾಗಿ ಖಂಡಿಸಿದ್ದಾರೆ.   ‘ಪ್ರಾರ್ಥನಾ ಸ್ಥಳಗಳು ಸ್ವರ್ಗವಾಗಬೇಕೇ ಹೊರತು, ಬಾಂಬ್‌ ದಾಳಿಗಳಿಗೆ ಗುರಿಯಾಗುವುದಲ್ಲ’ ಎಂದಿದ್ದಾರೆ. ʻಪ್ರಾರ್ಥನೆ ವೇಳೆ ಪಾಕಿಸ್ತಾನದ ಪೇಶಾವರದ ಮಸೀದಿಯ ಮೇಲೆ ನಡೆದ ಭೀಕರ ದಾಳಿಯನ್ನು ನಾನು ಖಂಡಿಸುತ್ತೇನೆ. ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಂತಾಪಗಳು’ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥರು ಟ್ವೀಟ್ ಮಾಡಿದ್ದಾರೆ.

Share Post