ಆಸ್ಟ್ರೇಲಿಯಾದಲ್ಲಿ ವಿಚಿತ್ರ ತಾಪಮಾನ: ಕಂಡಕಂಡಲ್ಲಿ ಹೊತ್ತಿಕೊಳ್ಳುತ್ತಿದೆ ಬೆಂಕಿ..!
ಸಿಡ್ನಿ: ಆಸ್ಟ್ರೇಲಿಯಾದಲ್ಲಿ ತಾಪಮಾನ ಏರಿಕೆಯಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ವಿಪರೀತ ತಾಪಮಾನದಿಂದಾಗಿ ಕಂಡಕಂಡಲ್ಲಿ ಬೆಂಕಿ ಹೊತ್ತುಕೊಳ್ಳುತ್ತಿದೆ. ಇಲ್ಲಿನ ಪಶ್ಚಿಮ ಕರಾವಳಿಯಲ್ಲಿ ಮಾರ್ಗರೇಟ್ ನದಿಯ ಸುತ್ತಲೂ ಬೆಂಕಿ ಆವರಿಸಿತ್ತು. ಇದರಿಂದಾಗಿ ಮುಗಿಲೆತ್ತರಕ್ಕೆ ಹೊಗೆ ಕೂಡಾ ಆವರಿಸಿತ್ತು. ಹೀಗಾಗಿ, ಸ್ಥಳೀಯರನ್ನು ಸುರಕ್ಷಿತ ಪ್ರದೇಶಗಳಿಗೆ ಶಿಫ್ಟ್ ಮಾಡಲಾಗಿದೆ. ಇನ್ನು ಪೂರ್ವ ಕರಾವಳಿಯಲ್ಲಿ ವ್ಯತಿರಿಕ್ತ ಪರಿಸ್ಥಿತಿ ಇದ್ದು, ಭಾರಿ ಮಳೆಯಿಂದಾಗಿ ಪ್ರವಾಹ ಸೃಷ್ಟಿಯಾಗಿದೆ.
ನ್ಯೂ ಸೌತ್ ವೇಲ್ಸ್ ಕರಾವಳಿಯಲ್ಲಿ ಕಡಿಮೆ ಒತ್ತಡದ ಪ್ರದೇಶ ರೂಪುಗೊಂಡಿದೆಯಂತೆ. ಇದರಿಂದಾಗಿಯೇ ಇಲ್ಲಿ ಭಾರೀ ಮಳೆ ಹಾಗೂ ಪ್ರವಾಹ ಉಂಟಾಗುತ್ತಿದೆ ಎಂದು ಹೇಳಲಾಗುತ್ತಿದೆ. ಆದರೆ, ಸರಿಯಾಗಿ ಎರಡು ವರ್ಷಗಳ ಹಿಂದೆ ಇದೇ ಪ್ರದೇಶದಲ್ಲಿ ಅತ್ಯಂತ ಭೀಕರವಾದ ಕಾಳ್ಗಿಚ್ಚು ಆವರಿಸಿತ್ತು. ಆದರೆ, ಈ ವರ್ಷ ಕಳೆದ 122 ವರ್ಷಗಳಲ್ಲೇ ಅತ್ಯಧಿಕ ಮಳೆಯಾಗಿದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ಖಂಡದಲ್ಲಿ ಪ್ರತಿಕೂಲ ಹವಾಮಾನ ಪರಿಸ್ಥಿತಿ ಉಂಟಾಗುತ್ತಿದೆ. ಕಾಳ್ಗಿಚ್ಚು ಮತ್ತು ಪ್ರವಾಹಗಳು ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿವೆ.