ಪುಟ್ಟ ಮಕ್ಕಳನ್ನು ಕಂಕುಳಲ್ಲಿರಿಸಿ, ಕಣ್ಣೀರು ಹಾಕುತ್ತಾ ದೇಶ ತೊರೆಯುತ್ತಿರುವ ಹೆತ್ತವರು-ಮನಕಲುಕುವ ದೃಶ್ಯ
ಉಕ್ರೇನ್: ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡುತ್ತಿರುವ ದೃಶ್ಯ ರಣಭೀಕರವಾಗಿದೆ. ಏನೂ ಅರಿಯದ ಪುಟ್ಟ ಮಕ್ಕಳು ಬಾಂಬ್, ಮಿಸೈಲ್ ದಾಳಿಯಿಂದ ನಡುಗುತ್ತಿದ್ದಾರೆ. ಅಮ್ಮನ ಮಡಿಲು, ಅಪ್ಪನ ತೋಳಲ್ಲಿ ಬಂಧಿಯಾಗಿ ಅಮ್ಮಾ..ಏನಾಗ್ತಿದೆ, ನಾವು ಸಾಯುತ್ತೀವಾ..? ಎಂದು ಏನೂ ಅರಿಯದ ಪುಟ್ಟ ಮಕ್ಕಳು ಕೇಳುವ ಪ್ರಶ್ನೆಗೆ ಉತ್ತರ ನೀಡಲಾಗದೆ ಹೆತ್ತವರು ಕಣ್ಣೀರು ಸುರಿಸುತ್ತಿದ್ದಾರೆ. ಮಕ್ಕಳನ್ನು ಕಂಕುಳಲ್ಲಿರಿಸಿ, ಗಂಡ, ಹೆತ್ತ ತಂದೆ-ತಾಯಿ, ಲಗೇಜ್ಗಳನ್ನು ಕೈಯಲ್ಲಿರಿಸಿ ಪ್ರಾಣ ಉಳಿಸಿಕೊಳ್ಳಲು ಉಕ್ರೇನಿಯನ್ನರು ಊರು ತೊರೆಯುತ್ತಿರುವ ದೇಶ್ಯಗಳು ಮನಕಲುಕುವಂತಿದೆ.
ಸುಮಾರು 50 ಸಾವಿರ ಜನ ಜೀವಗಳನ್ನು ಅಂಗೈಯಲ್ಲಿ ಹಿಡಿದಿಟ್ಟುಕೊಂಡು ಗಡಿ ದಾಟಿ ನೆರೆಯ ಐರೋಪ್ಯ ರಾಷ್ಟ್ರಗಳಿಗೆ ವಲಸೆ ಹೋಗುತ್ತಿದ್ದಾರೆ. ವಿಶ್ವಸಂಸ್ಥೆಯ ಅಂಗಸಂಸ್ಥೆಗಳು ಮಾಹಿತಿ ನೀಡಿವೆ. ಅದರಲ್ಲಿ ಹೆಚ್ಚಾಗಿ ಮಹಿಳೆಯರು ಮತ್ತು ಮಕ್ಕಳು ಈಗಾಗಲೇ ರೊಮೇನಿಯಾ, ಹಂಗೇರಿ, ಪೋಲೆಂಡ್ ಮತ್ತು ಸ್ಲೋವಾಕಿಯಾವನ್ನು ಪ್ರವೇಶಿಸಿದ್ದಾರೆ. ಪುರುಷರು ಯುದ್ಧದಲ್ಲಿ ಸಹಕರಿಸಲು ದೇಶದಲ್ಲೇ ಉಳಿದಿದ್ದಾರೆ. 48 ಗಂಟೆಗಳಲ್ಲಿ, 50,000 ಕ್ಕೂ ಹೆಚ್ಚು ಉಕ್ರೇನಿಯನ್ನರು ದೇಶವನ್ನು ತೊರೆದಿದ್ದಾರೆ. ಕೈಯಲ್ಲಿ ಸಾಮಾನುಗಳು, ಮಕ್ಕಳನ್ನು ಹಿಡಿದು ತಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಂಡು ಕಣ್ಣೀರಿನ ವಿದಾಯ ಹೇಳಿದರು.
ಪೋಲೆಂಡ್ ಗಡಿಯಲ್ಲಿ ಮೂಳೆ ಕೊರೆಯುವ ಚಳಿಯಲ್ಲಿ ಹೆಣ್ಮಕ್ಕಳು ಕೆಲವು ಗಂಟೆಗಳ ಕಾಲ ನಡೆಯಬೇಕಾಯಿತು. ದೇಶವನ್ನು ತೊರೆಯುವ ಮೊದಲು ಅವರ ನೀಡಿದ ಹೇಳಿಕೆ ಹೀಗಿದೆ “ರಷ್ಯನ್ನರು ಇಡೀ ದೇಶವನ್ನು ಆಕ್ರಮಿಸುತ್ತಾರೆ ನಮ್ಮ ಸೇನೆ ಸೇರಿದಂತೆ ಎಲ್ಲರೂ ಬಂಧನಕ್ಕೊಳಗಾಗುತ್ತಾರೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ ”ಇವಾ ಎಂಬ ಮಹಿಳೆ ತನ್ನ ಇಬ್ಬರು ಚಿಕ್ಕ ಮಕ್ಕಳೊಂದಿಗೆ ಹಂಗೇರಿಗೆ ಆಗಮಿಸಿದ್ದಾರೆ. ಎಷ್ಟೋ ಮಹಿಳೆಯರ ಸ್ಥಿತಿಯೂ ಇದೇ ಆಗಿದೆ.
ತನ್ನ ತೋಳುಗಳಲ್ಲಿ ಪುಟ್ಟ ಮಗುವಿನೊಂದಿಗೆ 36 ಗಂಟೆಗಳ ಕಾಲ ಪ್ರಯಾಣಿಸಿದ ಇನ್ನೊಬ್ಬ ಮಹಿಳೆ ಮಾತನಾಡಿ “ ಗುರುವಾರ ಬೆಳಿಗ್ಗೆಯಿಂದ ಬಾಂಬ್ ಸ್ಫೋಟಗಳಾಗುತ್ತಿವೆ. ಯಾವ ಕ್ಷಣದಲ್ಲಿ ಏನಾಗುತ್ತದೆ ಎಂದು ನಮಗೆ ತಿಳಿದಿಲ್ಲ, ಬಾಂಬ್ ಎಲ್ಲಿಗೆ ಹೋಗುತ್ತದೆ ಎಂದು ನಮಗೆ ತಿಳಿದಿಲ್ಲ. ಎಲ್ಲಿ ಸುರಕ್ಷಿತ ಎನಿಸುತ್ತದೆಯೋ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ಕಣ್ಣೀರು ಹಾಕಿದ್ದಾರೆ.