ನ್ಯಾಟೋ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲ; ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಎಚ್ಚರಿಕೆ
ವಾಷಿಂಗ್ಟನ್: ನ್ಯಾಟೋ ರಾಷ್ಟ್ರಗಳ ತಂಟೆಗೆ ಬಂದರೆ ಅಮೆರಿಕ ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ರಷ್ಯಾಗೆ ಎಚ್ಚರಿಕೆ ನೀಡಿದ್ದಾರೆ. ಶ್ವೇತಭವನದಲ್ಲಿ ಮಾತನಾಡಿರುವ ಅವರು, ರಷ್ಯಾವನ್ನು ಈಗ ತಡೆಯದಿದ್ದರೆ, ಅದು ಮತ್ತಷ್ಟು ಧೈರ್ಯಶಾಲಿಯಾಗುತ್ತದೆ ಎಂದಿದ್ದಾರೆ.
ರಷ್ಯಾ ಉಕ್ರೇನ್ ಮೇಲೆ ದಾಳಿ ನಡೆಸುತ್ತಿದೆ. ಈ ಸಂಬಂಧ ರಷ್ಯಾ ಆಧ್ಯಕ್ಷ ಪುಟಿನ್ ಅವರೊಂದಿಗೆ ಮಾತುಕತೆ ನಡೆಸುವ ಬಗ್ಗೆ ತೀರ್ಮಾನ ಮಾಡಿಲ್ಲ ಎಂದು ಓ ಬೈಡೆನ್ ಇದೇ ವೇಳೆ ಹೇಳಿದ್ದಾರೆ. ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರೊಂದಿಗೆ ಈಗಾಗಲೇ ಮಾತನಾಡಿದ್ದೇವೆ. ಉಕ್ರೇನ್ ಜನರ ಸಂಕಷ್ಟ ನಿವಾರಣೆಗೆ ಅಮೆರಿಕ ನೆರವಾಗುತ್ತದೆ. ಉಕ್ರೇನ್ಗೆ ನಾವು ಮಾನವೀಯ ನೆರವು ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ನ್ಯಾಟೋ ಸದಸ್ಯರಾಗಿರುವ ಪೂರ್ವ ಯುರೋಪಿಯನ್ ರಾಷ್ಟ್ರಗಳಿಗೆ ಅಗತ್ಯವಿರುವ ಎಲ್ಲಾ ಮಿಲಿಟರಿ ಸೌಲಭ್ಯಗಳನ್ನು ನಾವು ಒದಗಿಸಿದ್ದೇವೆ. ಇದರಿಂದಾಗಿ ರಷ್ಯಾದ ದಾಳಿ ದೊಡ್ಡ ಸಂಘರ್ಷಕ್ಕೆ ತಿರುಗುವುದಿಲ್ಲವೆಂಬ ಭರವಸೆ ಇದೆ. ನ್ಯಾಟೋ ಹಿಂದೆಂದಿಗಿಂತಲೂ ಹೆಚ್ಚು ಒಗ್ಗೂಡಿದೆ. ನ್ಯಾಟೋ ತಂಟೆಗೆ ಬಂದರೆ ನಾವು ಮಧ್ಯಪ್ರವೇಶಿಸಬೇಕಾಗುತ್ತದೆ ಎಂದು ಜೋ ಬೈಡೆನ್ ಎಚ್ಚರಿಸಿದ್ದಾರೆ.