BBMP ವ್ಯಾಪ್ತಿಯ 110 ಹಳ್ಳಿಗಳ ರಸ್ತೆ ಪುನರ್ ಸ್ಥಾಪನೆ ಕಾರ್ಯ ತ್ವರಿತವಾಗಿ ಪೂರ್ಣಗೊಳಿಸಿ: ಗೌರವ್ ಗುಪ್ತಾ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಜಲಂಡಳಿಯಿಂದ ಸಂಪೂರ್ಣ ಕಾಮಗಾರಿ ಮುಗಿದ ಕಡೆ ರಸ್ತೆ ಕತ್ತರಿಸಲ್ಪಟ್ಟಿರುವ ರಸ್ತೆ ಭಾಗಗಳ ಪುನರ್ ಸ್ಥಾಪನೆ ಕೆಲಸಗಳು ಆದಷ್ಟು ವ್ಯವಸ್ಥಿತ ರೀತಿಯಲ್ಲಿ, ದೀರ್ಘ ಬಾಳಿಕೆ ಬರುವ ರೀತಿಯಲ್ಲಿ ಆಗಬೇಕು ಎಂದು ಮಾನ್ಯ ಮುಖ್ಯ ಆಯುಕ್ತರಾದ ಗೌರವ್ ಗುಪ್ತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿ ರಸ್ತೆ ನಿರ್ವಹಣೆಗೆ ಸಂಬಂಧಿಸಿದಂತೆ ನಡೆದ ವರ್ಚುವಲ್ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾಲಿಕೆ ವ್ಯಾಪ್ತಿಯಲ್ಲಿ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ಜಲಮಂಡಳಿಯಿಂದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಅಗೆದಿರುವ ರಸ್ತೆಗಳ ಪೈಕಿ ಎಲ್ಲೆಲ್ಲಿ ಕೆಲಸ ಪೂರ್ಣಗೊಂಡಿದೆಯೋ ಅಂತಹ ರಸ್ತೆ ಪುನರ್ ಸ್ಥಾಪನೆ ಕಾರ್ಯ ಹಾಗೂ ಚರಂಡಿಗಳ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಲಮಂಡಳಿಗೆ ಸಂಬಂಧಿಸಿದಂತೆ ಯಾವುದೇ ವಿಚಾರಗಳಿದ್ದರೂ ಅದನ್ನು ಮುಖ್ಯ ಎಂಜಿನಿಯರ್ ಗಮನಕ್ಕೆ ತರಬೇಕು, ಬಗೆಹರಿಯದಿದ್ದಲ್ಲಿ ಮೇಲಧಿಕಾರಿಗಳ ಗಮನಕ್ಕೆ ತರಬೇಕು. ಕತ್ತರಿಸಲ್ಪಟ್ಟಿರುವ ರಸ್ತೆ ಭಾಗಗಳ ಪುನರ್ ಸ್ಥಾಪನೆ ಕೆಲಸಗಳು ಶೀಘ್ರವಾಗಿ, ಮಳೆಗಾಲ ಆರಂಭಕ್ಕೂ ಮುನ್ನ ವ್ಯವಸ್ಥಿತವಾಗಿ ಆಗಬೇಕು. ರಸ್ತೆ ದುರಸ್ತಿಯಿರುವ ಕಡೆ ವಾಹನಗಳ ಓಡಾಟಕ್ಕೆ ಅನುವಾಗುವಂತಿರಬೇಕು. ಸಾರ್ವಜನಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನಿಗದಿತ ಸಮಯದಲ್ಲಿ ಕೆಲವನ್ನು ಪೂರ್ಣಗೊಳಿಸಬೇಕು ಎಂದು ಹೇಳಿದರು.
ಬಿಬಿಎಂಪಿ ವ್ಯಾಪ್ತಿಯ 110 ಹಳ್ಳಿಗಳಿಗೆ ಸಂಬಂಧಿಸಿದಂತೆ ರಸ್ತೆ ಪುನರ್ ಸ್ಥಾಪನೆಯ ಸಂಪೂರ್ಣ ಕಾಮಗಾರಿಯನ್ನು ಎರಡು ತಿಂಗಳೊಳಗಾಗಿ ಪೂರ್ಣಗೊಳಿಸಲು ಗಡುವು ನೀಡಿದ್ದಾರೆ. ಎಲ್ಲೆಲ್ಲಿ ರಸ್ತೆ ಪುನರ್ ಸ್ಥಾಪನೆ ಹಾಗೂ ಡಾಂಬರೀಕರಣದ ಕೆಲಸವಾಗುತ್ತಿದೆ ಎಂಬ ಬಗ್ಗೆ ಪ್ರತಿನಿತ್ಯ ಮಾಹಿತಿಯನ್ನು ಪಾಲಿಕೆ ಕೇಂದ್ರ ಕಛೇರಿಗೆ ಸಲ್ಲಿಸಬೇಕು. ಜೊತೆಗೆ ಅಧಿಕಾರಿಗಳು ಜವಾಬ್ದಾರಿಯಿಂದ ಕೆಲಸ ನಿಭಾಯಿಸಿ ತ್ವರಿತಗತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ತಿಳಿಸಿದರು.
ಮೂಲಭೂತ ಸೌಕರ್ಯ ವಿಭಾಗಕ್ಕೆ ಸಂಬಂಧಿಸಿದಂತೆ 183.38 ಕಿ.ಮೀ ಉದ್ದದ 139 ರಸ್ತೆಗಳ ಪೈಕಿ 84.14 ಕಿ.ಮೀ ಉದ್ದದ 72 ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗಿದ್ದು, 99.24 ಕಿ.ಮೀ ಉದ್ದದ 67 ರಸ್ತೆಗಳಿಗೆ ಡಾಂಬರೀಕರಣ ಮಾಡುವ ಕೆಲಸ ಪ್ರಗತಿಯಲ್ಲಿದ್ದು, ಶೀಘ್ರ ಡಾಂಬರೀಕರಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ನೀರುಗಾಲುವೆ ವಿಭಾಗ
ಬಿಬಿಎಂಪಿ ವ್ಯಾಪ್ತಿಯಲ್ಲಿ ಬೃಹತ್ ನೀರುಗಾಲುವೆಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ನವ ನಗರೋತ್ಥಾನ ಯೋಜನೆಯಡಿ ಅಡಿ 113 ಕಿ.ಮೀ ರಾಜಕಾಲುವೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಅದರಲ್ಲಿ ಈಗಾಗಲೇ 96 ಕಿ.ಮೀ ಉದ್ದದ ರಾಜಕಾಲುವೆಯನ್ನು ಅಭಿವೃದ್ಧಿ ಕಾಮಗಾರಿ ಪೂರ್ಣಗೊಂಡಿರುತ್ತದೆ. ಬಾಕಿ ಉಳಿದ 17 ಕಿ.ಮೀ ಉದ್ದದ ರಾಜಕಾಲುವೆ ದುರಸ್ತಿ ಕಾಮಗಾರಿಯನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮುಖ್ಯ ಆಯುಕ್ತರು ಅಧಿಕಾರಿಗಳಿಗೆ ಸೂಚನೆ ನೀಡಿದರು.