Bengaluru

ಈ ಸರ್ಕಾರ ರಾಜ್ಯಪಾಲರ ಬಾಯಲ್ಲಿ ಬರೀ ಸುಳ್ಳು ಹೇಳಿಸಿದೆ-ಸಿಎಂ ನೀಡಿದ ಉತ್ತರಕ್ಕೆ ಸಿದ್ದು ಸಿಡಿಮಿಡಿ

ಬೆಂಗಳೂರು: ರಾಜ್ಯಪಾಲರು ಈ ಬಾರಿ ಸರ್ಕಾರದ ಒಂದು ವರ್ಷದ ಸಾಧನೆಯ ವರದಿಯನ್ನು ಸದನದಲ್ಲಿ ಓದಿದರು. ಸರ್ಕಾರವು ರಾಜ್ಯಪಾಲರ ಬಾಯಲ್ಲಿ ಹೇಳಿಸಿದ ಮಾತುಗಳಲ್ಲಿ ಬಹುಪಾಲು ಜೊಳ್ಳು ಹಾಗೂ ಈ ಸರ್ಕಾರಕ್ಕೆ ಯಾವುದೇ ಗೊತ್ತು ಗುರಿಗಳು ಇಲ್ಲ ಎಂಬುದರ ಸೂಚಕವಾಗಿವೆ. ಅನೇಕ ಕಡೆ ಕೇಂದ್ರದ ಕಾರ್ಯಕ್ರಮಗಳನ್ನು ಉಲ್ಲೇಖಿಸಲಾಗಿದೆ. ರಾಜ್ಯಪಾಲರ ಭಾಷಣದ ಮೇಲೆ ಸೂಚನೆಗಳನ್ನು ಮಂಡಿಸಿದ ಬಿಜೆಪಿಯ ಶಾಸಕರು ಮೋದಿಯವರನ್ನು ಮತ್ತು ಕೇಂದ್ರದ ಯೋಜನೆಗಳನ್ನು ಶ್ಲಾಘಿಸುವುದಕ್ಕಷ್ಟೆ ಸೀಮಿತಗೊಂಡರು. ನನ್ನ ರಾಜಕೀಯ ಜೀವನದಲ್ಲಿ ಇಷ್ಟು ಕಳಪೆ ಭಾಷಣವನ್ನು ಹಿಂದೆಂದೂ ಕೇಳಿರಲಿಲ್ಲ.

ಬಂಡವಾಳಿಗರ ಮತ್ತು ಕಾರ್ಪೋರೇಟ್ ಕುಳಗಳ ಮೂಗಿನ ನೇರಕ್ಕೆ ದೇಶವನ್ನು ಮುನ್ನಡೆಸುತ್ತಿರುವ ಮೋದಿ ಅವರು ಇದರಲ್ಲಿ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದರೆ, ಭಾರತದ ಅತಿ ಶ್ರೀಮಂತರಾದ ಅದಾನಿ ಅಂಬಾನಿ ಮುಂತಾದ 142 ಜನರ ಸಂಪತ್ತು 23 ಲಕ್ಷ ಕೋಟಿಗಳಿದ್ದದ್ದು ಈಗ ಅದು 53 ಲಕ್ಷ ಕೋಟಿಗಳಿಗೆ ಏರಿಕೆಯಾಗಿದೆ. ಆದರೆ ಜನರ ಮೇಲಿನ ತೆರಿಗೆ ಹೊರೆ, ಬೆಲೆ ಏರಿಕೆ ಎರಡೂ ದುಪ್ಪಟ್ಟಾಗಿವೆ.

ರಾಜ್ಯದಿಂದ ಮೋದಿ ಸರ್ಕಾರವು 3 ಲಕ್ಷ ಕೋಟಿ ರೂಗಳಷ್ಟು ವಿವಿಧ ರೂಪದ ತೆರಿಗೆಗಳನ್ನು ಸಂಗ್ರಹಿಸುವ ಕೇಂದ್ರವು ವಾಪಸ್ಸು ನೀಡುತ್ತಿರುವುದು ಕೇವಲ 43 ಸಾವಿರ ಕೋಟಿ. ಇದರಿಂದ ರಾಜ್ಯದ ಆರ್ಥಿಕತೆಯೂ ದಿಕ್ಕುತಪ್ಪಿದೆ. 2018 ರ ವರೆಗೆ 2.42 ಲಕ್ಷ ಕೋಟಿಗಳಷ್ಟಿದ್ದ ರಾಜ್ಯದ ಸಾಲ ಈಗ 4.57 ಲಕ್ಷ ಕೋಟಿಗಳಷ್ಟಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ, ಯುವಜನರ ಕಲ್ಯಾಣ ಮತ್ತು ನೇಕಾರರು ಮೀನುಗಾರರು ಕುಂಬಾರರು ಅಕ್ಕಸಾಲಿಗರು, ಮೇದಾರÀರು, ಕ್ಷೌರಿಕರು, ಉಪ್ಪಾರರು ವಿವಿಧ ವಾಹನ ಚಾಲಕರು, ಮಡಿವಾಳರು ಮುಂತಾದ ಕುಶಲ ಕರ್ಮಿಗಳ ಕುರಿತು ಒಂದಕ್ಷರದ ಪ್ರಸ್ತಾಪವಿಲ್ಲ. ಲೋಕೋಪಯೋಗಿ, ಸಣ್ಣ ಕೈಗಾರಿಕೆ, ನಗರ, ಪಟ್ಟಣಗಳ ಅಭಿವೃದ್ಧಿ ಕುರಿತು ರಾಜ್ಯಪಾಲರ ಭಾಷಣದಲ್ಲಿ ಪ್ರಸ್ತಾಪವಿಲ್ಲ. ರಾಜ್ಯಪಾಲರ ಭಾಷಣದಲ್ಲಿ ಜನರ ಕಲ್ಯಾಣದ ಕುರಿತು ಪ್ರಸ್ತಾಪವೂ ಇಲ್ಲ. ಅಭಿವೃದ್ಧಿ ಕುರಿತಾದ ಪ್ರಸ್ತಾಪವೂ ಇಲ್ಲ. ಈ ಕುರಿತು ತಾನು ಏನೂ ಮಾಡಿಲ್ಲ ಎಂದು ಸರ್ಕಾರವೆ ಪ್ರಾಮಾಣಿಕವಾಗಿ ಒಪ್ಪಿಕೊಂಡಿದೆ. ತನ್ನ ಅದಕ್ಷತೆಯನ್ನು ಒಪ್ಪಿಕೊಂಡದ್ದಕ್ಕಾಗಿ ಸರ್ಕಾರಕ್ಕೆ ಅಭಿನಂದಿಸುತ್ತೇನೆ.

ಸರ್ಕಾರ ರಾಜ್ಯಪಾಲರ ಮೂಲಕ ಓದಿಸಿದ 116 ಪ್ಯಾರಾಗÀಳಲ್ಲಿ 22 ಪ್ಯಾರಾಗಳನ್ನು ಕೋವಿಡ್ ಯಶಸ್ವಿ ನಿರ್ವಹಣೆ, 8 ಪ್ಯಾರಾಗಳನ್ನು ಪ್ರವಾಹವನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ್ದೇವೆಂದು ಕೊಚ್ಚಿಕೊಳ್ಳಲು ದುರುಪಯೋಗಪಡಿಸಿಕೊಂಡಿದೆ. ಕೋವಿಡ್‍ನಿಂದ ರಾಜ್ಯದಲ್ಲಿ 4 ಲಕ್ಷ ಜನರು ಮರಣ ಹೊಂದಿದ್ದರೆ, ಅಸಂಖ್ಯಾತ ಮಕ್ಕಳು ತಬ್ಬಲಿಗಳಾಗಿವೆ. ವೃದ್ಧ ತಂದೆ ತಾಯಿಗಳು ಅನಾಥರಾಗಿದ್ದಾರೆ. ಆದರೂ ಸಹ ಸರ್ಕಾರ ತಾವು ಸಾಧನೆ ಮಾಡಿದ್ದೇವೆಂದು ರಾಜ್ಯಪಾಲರ ಬಾಯಲ್ಲಿ ಹೇಳಿಸಿದೆ.

ಎನ್.ಇ.ಪಿ. ಯಂಥ ಮನೆಹಾಳು ನೀತಿಗಳನ್ನು ಸರ್ಕಾರ ಸಾಧನೆ ಎಂದು ಹೇಳಿಸಿದೆ. ಕಾಲೇಜು- ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರುಳಿಲ್ಲ, ಶಾಲೆಗಳಲ್ಲಿ ಮಕ್ಕಳಿಗೆ ಪಠ್ಯ ಪುಸ್ತಕಗಳಿಲ್ಲ. ವಿಶ್ವ ವಿದ್ಯಾಲಯಗಳಲ್ಲಿ ವೈಜ್ಞಾನಿಕ ಮನೋಭಾವಗಳಿರುವ ಅಧ್ಯಾಪಕರಿಲ್ಲ. ಸ್ವತಂತ್ರವಾಗಿ ಅಧ್ಯಯನ ಮಾಡುವ, ಬರೆಯುವ ಅಧ್ಯಾಪಕರಿಗೆ ಸರ್ಕಾರದ ಕಿರುಕುಳದ ಭಯ. ಹೀಗಾಗಿ ಸಂಸ್ಕೃತದಂತಹ ಭಾಷೆಗಳ ಹೇರಿಕೆಗಷ್ಟೆ ಎನ್‍ಇಪಿ ಸೀಮಿತವಾಗಿದೆ. ವಸತಿಯ ವಿಚಾರದಲ್ಲಿ ಕೇವಲ ಭವಿಷ್ಯ ನುಡಿಯಲಾಗಿದೆಯೇ ಹೊರತು ಸಾಧನೆಗಳಿಲ್ಲ.
ಸರ್ಕಾರ ಸುಳ್ಳು ಹೇಳಿ, ತನ್ನ ಬೆನ್ನನ್ನು ತಾನೆ ತಟ್ಟಿಕೊಂಡು ಓಡಾಡುತ್ತಿದೆ ಎಂಬುದಕ್ಕೆ ರಾಜ್ಯಪಾಲರ ಭಾಷಣವೆ ಸಾಕ್ಷಿ. ರಾಜ್ಯವು ಅತಿ ಕೆಟ್ಟ ಆಡಳಿತವನ್ನು ಎದುರಿಸುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿ ಈ ಭಾಷಣವಿದೆ.

Share Post