National

HAWALA CASE: ದಾವೂದ್‌ ಸಹಚರರ ಅಕ್ರಮ ಹಣ ವರ್ಗಾವಣೆ ದಂಧೆ; ಸಚಿವ ನವಾಬ್‌ ಮಲಿಕ್‌ ಅರೆಸ್ಟ್‌

ಮುಂಬೈ; ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರ ಅಕ್ರಮ ಹಣ ವರ್ಗಾವಣೆ  ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಇಂದು ಮಹಾರಾಷ್ಟ್ರ ಸರ್ಕಾರದ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ನವಾಬ್ ಮಲಿಕ್ ಅವರನ್ನು ಬಂಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. 

ಸಚಿವ ಬಂಧನದಿಂದ ಸಿಎಂ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ)ಗೆ ಭಾರಿ ಮುಖಭಂಗವಾಗಿದೆ. ಪರಾರಿಯಾಗಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಡಿ-ಗ್ಯಾಂಗ್‌ನ ಇಡಿ ತನಿಖೆಗೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧನದ ನಂತರ ಮಲಿಕ್ ಅವರನ್ನು ಸಂಪುಟದಿಂದ ಕೆಳಗಿಳಿಸುವ ಸಾಧ್ಯತೆಯಿದೆ. ಎನ್‌ಸಿಪಿಗೆ ಸೇರಿದ ಮಹಾರಾಷ್ಟ್ರದ ಎರಡನೇ ಸಚಿವರನ್ನು ಬಂಧಿಸಿದ ನಂತರ ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ತುರ್ತು ಸಭೆಗೆ ಕರೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಅನಿಲ್ ದೇಶಮುಖ್ ಅವರು ಇಡಿ ಬಂಧನದಲ್ಲಿದ್ದಾರೆ.

ಇದಕ್ಕೂ ಮುನ್ನ, ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸಂಸ್ಥೆ ಮಲಿಕ್ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿತ್ತು. ಫೆಬ್ರವರಿ 15 ರಂದು ಮುಂಬೈನಲ್ಲಿ ಭೂಗತ ಜಗತ್ತಿನ ಕಾರ್ಯಾಚರಣೆಗಳು, ಅಕ್ರಮ ಆಸ್ತಿ ವ್ಯವಹಾರಗಳು ಮತ್ತು ಹವಾಲಾ ವಹಿವಾಟುಗಳಿಗೆ ಸಂಬಂಧಿಸಿದಂತೆ ಹೊಸ ಪ್ರಕರಣ ಮತ್ತು ದಾಳಿಗಳನ್ನು ನಡೆಸಿದ ನಂತರ ಇಡಿ ಅಧಿಕಾರಿಗಳು ಸಚಿವರನ್ನು ಬಂಧಿಸಿದ್ದಾರೆ.

Share Post