National

ರಾಷ್ಟ್ರಪತಿ ರೇಸ್‌ನಲ್ಲಿ ನಾನಿಲ್ಲ-ಬಿಹಾರ್‌ ಸಿಎಂ ನಿತೀಷ್ ಕುಮಾರ್‌ ಸ್ಪಷ್ಟನೆ

ಬಿಹಾರ್:‌ ರಾಷ್ಟ್ರಪತಿ ಅಭ್ಯರ್ಥಿಯಾಗಿ ಬಿಹಾರ್ ಸಿಎಂ ನಿತೀಶ್ ಕುಮಾರ್ ಸ್ಪರ್ಧೆ ಮಾಡಲಿದ್ದಾರೆ ಎಂದು ಹರಡುತ್ತಿರುವ ಮಾಹಿತಿ ವಿಚಾರವಾಗಿ ನಿತೀಶ್‌ ಕುಮಾರ್‌ ಪ್ರತಿಕ್ರಿಯೆ ನೀಡಿದ್ದಾರೆ.  ʻತಾನು ರಾಷ್ಟ್ರಪತಿ ಹುದ್ದೆ ರೇಸ್‌ನಲ್ಲಿ ಇಲ್ಲ.. ಈ ವಿಷಯದ ಬಗ್ಗೆ ನನಗೆ ಮಾಹಿತಿಯೇ ಇಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಗಳವಾರ ಭಾಗಲ್‌ಪುರದಲ್ಲಿ ಮಾತನಾಡುತ್ತಾ..ರಾಷ್ಟ್ರಪತಿ ಹುದ್ದೆಗೆ ಸ್ಪರ್ಧೆ ಮಾಡುತ್ತಿರುವ ಬಗ್ಗೆ ಬರುತ್ತಿರುವ ಸುದ್ದಿಗಳಲ್ಲಿ ನಿಜವಿಲ್ಲ ಎಂದು ವದಂತಿಗಳನ್ನು ತಳ್ಳಿ ಹಾಕಿದ್ದಾರೆ.

ಫೆಬ್ರುವರಿ 18 ರಂದು ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಜೊತೆ ಸಿಎಂ ನಿತೀಶ್ ಕುಮಾರ್ ರಹಸ್ಯ ಸಭೆ ನಡೆಸಿದ್ದಾರೆ. ಇಬ್ಬರೂ ಸುಮಾರು ಎರಡು ಗಂಟೆಗಳ ಕಾಲ ಮಾತುಕತೆ ನಡೆಸಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ವಿಚಾರವಾಗಿ ಇಬ್ಬರೂ ಭೇಟಿಯಾಗಿರಬಹುದು ಎಂಬ ಊಹಾಪೋಹಗಳು ಹರಿದಾಡುತ್ತಿವೆ. ಆದರೆ, ತಮ್ಮ ಭೇಟಿಯಲ್ಲಿ ರಾಜಕೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಿಲ್ಲ ಎಂದು ಇಬ್ಬರೂ ಘೋಷಿಸಿದ್ದಾರೆ.

ಈ ನಡುವೆ ಎನ್‌ಸಿಪಿ ಪ್ರಧಾನ ಕಾರ್ಯದರ್ಶಿ ನವಾಬ್ ಮಲಿಕ್ ನಿತೀಶ್‌ ಕುಮಾರ್‌ ಅವರನ್ನು ಹೆಸರನ್ನು ರಾಷ್ಟ್ರಪತಿ ಹುದ್ದೆಗೆ ಅಧಿಕೃತ ಮಾಡಲು ವಿರೋಧ ಪಕ್ಷಗಳು ಸಿದ್ದವಾಗಿವೆ, ಆದರೆ ಬಿಹಾರದಲ್ಲಿ ಬಿಜೆಪಿಯೊಂದಿಗಿನ ಜೆಡಿಯು ಮೈತ್ರಿ ಮುರಿದುಕೊಂಡರೆ ಮಾತ್ರ ಸಾಧ್ಯ ಎಂಬ ಮಾತನ್ನು ಹೇಳಿದ್ದಾರೆ. ಪರ್ಯಾಯ ಮೈತ್ರಿಕೂಟ ರಚನೆ ಕುರಿತು ತೆಲಂಗಾಣ ಸಿಎಂ ಕೆಸಿಆರ್, ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರೊಂದಿಗೆ ಸಭೆ ನಡೆಸಿದ ನಂತರ ರಾಷ್ಟ್ರಪತಿ ಅಭ್ಯರ್ಥಿಯನ್ನು ಘೋಷಿಸುವ ವಿಷಯವು ಮಹತ್ವ ಪಡೆದುಕೊಂಡಿದೆ. ಶುಕ್ರವಾರ ನಿತೀಶ್ ಅವರನ್ನು ಭೇಟಿ ಮಾಡಿದ ಪ್ರಶಾಂತ್ ಕಿಶೋರ್ ಅವರು ರಾಷ್ಟ್ರಪತಿ ಅಭ್ಯರ್ಥಿಯ ಕುರಿತು ಹಿರಿಯ ನಾಯಕರು, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ನಂತರ ಈ ಬಗ್ಗೆ ಒಂದು ನಿರ್ಣಯ ಬರುವ ಸಾಧ್ಯತೆ ಇದೆ. ಬಿಹಾರದ ಉಪಮುಖ್ಯಮಂತ್ರಿ ಮತ್ತು ಬಿಜೆಪಿಯ ಹಿರಿಯ ನಾಯಕ ತಾರ್ಕಿಶೋರ್ ಪ್ರಸಾದ್ ಅವರು ನಿತೀಶ್ ಅವರ ರಾಷ್ಟ್ರಪತಿ ಹುದ್ದೆಗೆ ಥಳಕು ಹಾಕಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿ, “ಸದ್ಯ ರಾಷ್ಟ್ರಪತಿ ಹುದ್ದೆಯಲ್ಲಿ ರಾಮನಾಥ್ ಕೋವಿಂದ್ ಇರುವುದರಿಂದ ರಾಷ್ಟ್ರಪತಿ ಸ್ಥಾನ ಖಾಲಿ ಇಲ್ಲ” ಎಂದು ಹೇಳಿದ್ದಾರೆ.

Share Post