HARSHA MURDER CASE; ಸಹಜ ಸ್ಥಿತಿಗೆ ತಲುಪಿದ ಶಿವಮೊಗ್ಗ ನಗರ; ಎಂದಿನಂತೆ ಎಲ್ಲಾ ಚಟುವಟಿಕೆ
ಶಿವಮೊಗ್ಗ: ಹಿಂದೂಪರ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ನಂತರ ಶಿವಮೊಗ್ಗ ನಗರದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಶಿವಮೊಗ್ಗ ನಗರ ಸಹಜ ಸ್ಥಿತಿಗೆ ಬಂದಿದೆ. ಸಾರ್ವಜನಿಕರು ಯಾವುದೇ ಭೀತಿಯಿಲ್ಲದೇ ತಮ್ಮ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ.
ನಿನ್ನೆಯಿಂದ ಶಿವಮೊಗ್ಗದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಆದರೂ ಇವತ್ತೂ ಕೂಡಾ ನಿಷೇಧಾಜ್ಞೆ ಜಾರಿಯಲ್ಲಿದೆ. ಬೆಳಗ್ಗೆ 6 ರಿಂದ 9 ಗಂಟೆವರೆಗೆ ಅಗತ್ಯ ವಸ್ತುಗಳ ಖರೀದಿಗೆ ಶಿವಮೊಗ್ಗ ನಗರದಲ್ಲಿ ಅವಕಾಶ ನೀಡಲಾಗಿತ್ತು. ಜನರು ಬೆಳಗ್ಗೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಿದರು. ಇದೀಗ ನಗರದಲ್ಲಿ ಎಲ್ಲವೂ ಶಾಂತವಾಗಿದೆ. ಆದರೂ ಮುಂಜಾಗ್ರತಾ ಕ್ರಮವಾಗಿ ಎಲ್ಲೆಡೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಶುಕ್ರವಾರದವರೆಗೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಉಳಿದಂತೆ ಎಲ್ಲಾ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ವ್ಯಾಪಾರ ವಹಿವಾಟುಗಳು ಕೂಡಾ ಎಂದಿನಂತೆ ನಡೆಯುತ್ತಿವೆ.
ಕೊಲೆಯಾದ ಹರ್ಷ ಮನೆ ಇರುವ ಸೀಗೆಹಟ್ಟಿ, ಬಸವನಬೀದಿ ಸೇರಿದಂತೆ ಹಳೇ ನಗರದ ಸೂಕ್ಷ್ಮ ಪ್ರದೇಶಗಳು ಹಾಗೂ ಕೊಲೆ ಆರೋಪಿಗಳ ಪ್ರದೇಶಗಳಲ್ಲಿ ಸಾಕಷ್ಟು ಪೊಲೀಸರನ್ನು ನಿಯೋಜಿಸಲಾಗಿದೆ. ನಗರದ ಪ್ರಮುಖ ಮಾರ್ಗಗಳಲ್ಲಿ ಪೊಲೀಸ್ ಪಡೆ ಬೆಳಿಗ್ಗೆಯಿಂದಲೇ ಗಸ್ತು ತಿರುಗುತ್ತಿವೆ.