Bengaluru

ರಾಜೀನಾಮೆ ಬೇಡ, ಸಂಪುಟದಿಂದ ವಜಾ ಮಾಡಿ; ಡಿ.ಕೆ.ಶಿವಕುಮಾರ್‌ ಆಗ್ರಹ

ಬೆಂಗಳೂರು: ನಾವು ಸಚಿವ ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಿರಿ ಎಂದು ಸರ್ಕಾರಕ್ಕೆ ಕೇಳುತ್ತಿಲ್ಲ. ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂಬುದು ನಮ್ಮ ಆಗ್ರಹ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಪ್ರಮಾಣವಚನ ಸ್ವೀಕರಿಸುವಾಗ ಏನೆಂದು ಪ್ರಮಾಣ ಮಾಡಿದ್ದರು? ಸಂವಿಧಾನ ಕಾಪಾಡುತ್ತೇನೆ, ದೇಶದ ಗೌರವ ಕಾಪಾಡುತ್ತೇನೆ ಎಂದಿದ್ದರು. ಹೀಗಾಗಿ ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರು ಈಗ ಆ ಕೆಲಸ ಮಾಡಬೇಕಲ್ಲವೇ? ಇದು ಕೇವಲ ಈಶ್ವರಪ್ಪನ ವಿಚಾರ ಅಲ್ಲ. ರಾಷ್ಟ್ರಧ್ವಜ ಗೌರವದ ಪ್ರಶ್ನೆ ಎಂದು ಹೇಳಿದರು.

ವಿಧಾನಸೌಧದಲ್ಲಿ ಅಹೋರಾತ್ರಿ ನಡೆಸಿದ ಧರಣಿ ನಮ್ಮ ಹಾಗೂ ಬಿಜೆಪಿ ನಡುವಣ ವೈಯಕ್ತಿಕ ಹೋರಾಟ ಅಲ್ಲ. ಈಶ್ವರಪ್ಪ ಅವರು ನನ್ನ ತಂದೆಯನ್ನು ಎಳೆದು ತಂದಿದ್ದಾರೆ. ಅದು ವೈಯಕ್ತಿಕ ವಿಚಾರವಾದರೂ ನಾನು ಆ ಬಗ್ಗೆ ಮಾತನಾಡುತ್ತಿಲ್ಲ. ಇದು ದೇಶದ ಸ್ವಾತಂತ್ರ್ಯ, ಸಂವಿಧಾನ, ರಾಷ್ಟ್ರಧ್ವಜಕ್ಕೆ ಸಂಬಂಧಿಸಿದ ವಿಚಾರ. ಇದಕ್ಕಾಗಿ ನಮ್ಮ, ನಿಮ್ಮ ಪೂರ್ವಜರು ಮಾಡಿರುವ ತ್ಯಾಗ ಬಲಿದಾನ ಅಪಾರವಾಗಿದೆ. ಇದು ದೇಶದ ಗೌರವ ಹಾಗೂ 135 ಕೋಟಿ ಭಾರತೀಯರ ಸ್ವಾಭಿಮಾನದ ಪ್ರಶ್ನೆ ಎಂದು ಡಿ.ಕೆ.ಶಿವಕುಮಾರ್‌ ಇದೇ ಸಂದರ್ಭದಲ್ಲಿ ತಿಳಿಸಿದರು.

ರಾಷ್ಟ್ರಧ್ವಜ ಹಾರುವಾಗ ನಮ್ಮೆಲ್ಲರ ಮೈ ರೋಮಾಂಚನವಾಗುತ್ತದೆ. ಅಂತಹ ಧ್ವಜ ತೆಗೆದುಹಾಕಿ, ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದರೆ ನೋಡಿಕೊಂಡು, ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವೇ? ಈ ವಿಚಾರದಲ್ಲಿ ಮುಖ್ಯಮಂತ್ರಿಗಳು ಸಮರ್ಥನೆಗೆ ಮುಂದಾದರೆ ಅವರೂ ಕೂಡ ಇದಕ್ಕೆ ಹೊಣೆಯಾಗುತ್ತಾರೆ. ಸದನದ ಸಮಯ ಹಾಳಾಗುತ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌, ‘ಕುಮಾರಸ್ವಾಮಿ ಅವರು ಸದನಕ್ಕೆ ಬಂದು ದೇವರು ಕೂತಂತೆ ಕೂತು ರೈತರು ಸೇರಿದಂತೆ ಅವರಿಗೆ ಬೇಕಾದ ವಿಚಾರಗಳ ಬಗ್ಗೆ ಮಾತನಾಡಲಿ. ಟ್ರೈಲರ್ ತೋರಿಸುತ್ತೇವೆ ಎಂದು ಹೇಳಿದ್ದಾರೆ, ಅದನ್ನೂ ನೋಡೋಣ’ ಎಂದು ತಿರುಗೇಟು ನೀಡಿದರು.

Share Post