BengaluruPolitics

ಜಾತಿ ಗಣತಿ ವರದಿ ಕಾಂಗ್ರೆಸ್‌ ಪಕ್ಷದಲ್ಲೇ ವಿರೋಧ; ಡಿ.ಕೆ.ಶಿವಕುಮಾರ್‌ ಸಹಿ ಹಾಕಿದ್ದೇಕೆ..?

ಬೆಂಗಳೂರು; ಬಿಹಾರದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಿದ ಮೇಲೆ ಕರ್ನಾಟಕದಲ್ಲೂ ಜಾತಿ ಗಣತಿ ರಿಲೀಸ್‌ ಮಾಡೋದಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಕೂಡಾ ಜಾತಿ ಗಣತಿ ವರದಿ ರಿಲೀಸ್‌ ಮಾಡಲಾಗುವುದು ಎಂದು ಹೇಳಿದ್ದರು. ಸಿಎಂ ಸಿದ್ದರಾಮಯ್ಯ ಕೂಡಾ ಜಾತಿ ಗಣತಿ ವರದಿ ರಿಲೀಸ್‌ ಮಾಡೋದಕ್ಕೆ ಹೆಚ್ಚು ಆಸಕ್ತಿ ತೋರಿಸಿದ್ದಾರೆ. ಹೀಗಿರುವಾಗಲೇ ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗುತ್ತಿವೆ. ಅದರಲ್ಲೂ ಕಾಂಗ್ರೆಸ್‌ನಲ್ಲಿರುವ ಹಲವು ಹಿರಿಯ ನಾಯಕರೇ ಜಾತಿ ಗಣತಿ ವರದಿ ಬಿಡುಗಡೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಜಾತಿಗಣತಿ ವರದಿ ರಿಲೀಸ್‌ ಮಾಡಬಾರದು ಎಂದಿದ್ದರು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಸರದಿ. ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ಜಾತಿ ಗಣತಿ ವರದಿಗೆ ವಿರೋಧವಿದ್ದಾರೆ ಎಂಬುದು ಸಾಬೀತಾಗಿದೆ. 

ಯಾಕಂದ್ರೆ, ಇದೀಗ ಜಾತಿ ಗಣತಿ ವರದಿ ಕುರಿತಾದ ಆಕ್ಷೇಪ ಪತ್ರಕ್ಕೆ ಡಿ.ಕೆ.ಶಿವಕುಮಾರ್‌ ಅವರ ಸಹಿ ಹಾಕಿದ್ದಾರೆ. ಒಕ್ಕಲಿಗರ ಸಂಘದಿಂದ ಆಕ್ಷೇಪಣಾ ಪತ್ರ ಸಿದ್ಧಪಡಿಸಲಾಗಿದ್ದು, ಇದರಲ್ಲಿ ಹಲವು ಒಕ್ಕಲಿಗ ಮುಖಂಡರು ಸಹಿ ಹಾಕಿದ್ದಾರೆ. ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ಸಹಿ ಹಾಕಿದ್ದಾರೆ. ಒಕ್ಕಲಿಗ ಸಮುದಾಯದ ಹಲವು ರಾಜಕೀಯ ನಾಯಕರು, ಒಕ್ಕಲಿಗರ ಸಂಘ ಹಾಗೂ ಒಕ್ಕಲಿಗ ಸಮುದಾಯದ ಸ್ವಾಮೀಜಿಗಳೂ ಕೂಡಾ ಜಾತಿ ಗಣತಿ ವರದಿ ಅವೈಜ್ಞಾನಿಕ ಎಂದು ಹೇಳಿದ್ದು, ಅದರ ರಿಲೀಸ್‌ಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಲಿಂಗಾಯತ ಸಮುದಾಯದ ನಾಯಕರು, ಸ್ವಾಮೀಜಿಗಳಿಂದಲೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಹೀಗಿರುವಾಗಲೇ ಕಾಂಗ್ರೆಸ್‌ ಸರ್ಕಾರದ ಭಾಗವಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ಜಾತಿ ಗಣತಿ ವರದಿ ವಿರೋಧಿಸಿ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ.

ಈ ಬಗ್ಗೆ ಡಿ.ಕೆ.ಶಿವಕುಮಾರ್‌ ಸ್ಪಷ್ಟನೆ ಕೂಡಾ ಕೊಟ್ಟಿದ್ದಾರೆ. ಸಹಿ ಯಾಕೆ ಮಾಡಬಾರದು? ಮಾಡಿದರೆ ತಪ್ಪೇನು? ಅದು ನಮ್ಮ ಸಮಾಜದ ನಿರ್ಣಯ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ. ನಮ್ಮ ಸಮಾಜದ ನಿರ್ಣಯ ಬೇರೆ ರಾಜಕೀಯ ಬೇರೆ. ನಾನು ಮತ್ತು ಸಚಿವರು ಸಭೆಯಲ್ಲಿ ಭಾಗವಹಿಸಿದ್ದೇವೆ. ಸಮಾಜದ ಮುಖಂಡರು ವೈಜ್ಞಾನಿಕವಾಗಿ ಆಗಬೇಕು ಎಂದು ಹೇಳಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಲಿಂಗಾಯತ ಸಮುದಾಯವನ್ನು ಪ್ರತಿನಿಧಿಸುವ ಶಾಮನೂರು ಶಿವಶಂಕರಪ್ಪ ಜಾತಿ ಗಣತಿಯನ್ನು ವಿರೋಧಿಸಿದ್ದಾರೆ. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್‌ ಕೂಡಾ ವಿರೋಧ ವ್ಯಕ್ತಪಡಿಸಿದ ಬರೆದ ಪತ್ರಕ್ಕೆ ಸಹಿ ಹಾಕಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಲ್ಲೇ ಎರಡು ಅಭಿಪ್ರಾಯ ವ್ಯಕ್ತವಾದಂತಾಗಿದೆ.

 

Share Post