Districts

ಪಾಳುಬಿದ್ದ ಸರ್ಕಾರಿ ಜಮೀನಿನಲ್ಲಿ ತಲೆಯೆತ್ತಿದ ಸುಂದರವಾದ ಉದ್ಯಾನವನ-ಅಧಿಕಾರಿಯ ಕಾರ್ಯಕ್ಕೆ ಮೆಚ್ಚುಗೆ

ಚಿಕ್ಕಬಳ್ಳಾಪುರ: ಕಸದಲ್ಲಿ ರಸ ಮಾಡು ಎಂಬ ಗಾದೆಯಂತೆ ಪಾಳು ಬಿದ್ದಿದ್ದ ಸರ್ಕಾರಿ ಜಮೀನನ್ನು ಸರ್ಕಾರಿ ಅಧಿಕಾರಿಯೊಬ್ಬರು ಸುಂದರ ಉದ್ಯಾನವನ್ನು ನಿರ್ಮಾಣ ಮಾಡಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯತ್‌ ಸಿಇಓ ಪಿ.ಶಿವಶಂಕರ್‌ ಅವರು ತಮಗೆ ನೀಡದ್ದ ಸರ್ಕಾರಿ ವಸತಿ ಗೃಹದ ಮುಂದೆ 17ಗುಂಟೆ ಜಮೀನು ಪಾಳು ಬಿದ್ದಿತ್ತು. ಹಾವು, ಚೇಳು ವಿಷಪ್ರಾಣಿಗಳ ತಾಣವಾಗಿದ್ದ ಸರ್ಕಾರಿ ಜಮೀನನ್ನು ಮಿನಿ ಗಾರ್ಡನ್‌ ಮಾಡಿದ್ದಾರೆ. ಹಾವು, ಚೇಳುಗಳು ಮನೆಯೊಳಗೆ ಬರುವುದನ್ನು ಮನಗಂಡ ಸಿಇಓ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿಯಡಿ 12ಲಕ್ಷ ಖರ್ಚು ಮಾಡಿ ಈ ಪಾರ್ಕ್‌ ನಿರ್ಮಾಣ ಮಾಡಿದ್ದಾರೆ.

ನರೇಗಾ ಯೋಜನೆಯಡಿ 12ಲಕ್ಷ ವ್ಯಯಿಸಿ ಜಾಬ್‌ಕಾರ್ಡ್‌ ಇರುವವರಿಗೆ 8ಲಕ್ಷ ಕೂಲಿ, ಹಾಗೂ  4ಲಕ್ಷಕ್ಕೆ ಪಾರ್ಕ್‌ ನಿರ್ಮಾಣಕ್ಕೆ ಬೇಕಾಗಿರುವ ಸಾಮಗ್ರಿಗಳ ಖರೀದಿಗೆ ಖರ್ಚು ಮಾಡಲಾಗಿದೆ. ಪಾಳುಬಿದ್ದ ಜಾಗ ಈಗ ಮನಸೂರೆಗೊಳಿಸುವ ತಾಣವಾಗಿ ಮಾರ್ಪಾಡಾಗಿದೆ. ವಾಕಿಂಗ್ ಲೇನ್‌ಗಳು, ಕುಳಿತುಕೊಳ್ಳಲು ಹಟ್‌ಗಳು, ನೀರಿನ ಕಾರಂಜಿ, ಗಾರ್ಡನ್, ವೆಜಿಟೇಬಲ್ ಗಾರ್ಡನ್, ರೋಸ್ ಗಾರ್ಡನ್ ಸೇರಿದಂತೆ ವಿನೂತನ ಮಾದರಿಯ ಅಲಂಕಾರಿಕ ಗಿಡಗಳನ್ನು ಬೆಳೆಸಿದ್ದಾರೆ.

ಸಂಜೆ ತಣ್ಣನೆ ಗಾಳಿ ಪಡೆದುಕೊಳ್ಳಲು, ವಾಕಿಂಗ್‌ ಮಾಡಲು, ಬಗೆ ಬಗೆಯ ಹೂಗಳು ಮನಸನ್ನು ಆಕರ್ಷಿಸುತ್ತವೆ. ಮನಸಿಗೆ ನೆಮ್ಮದಿಯನ್ನು ತಂದುಕೊಡುತ್ತದೆ. ಮೊದಲು ಹಳೆ ಪ್ಲಾಸ್ಟಿಕ್‌ ಕವರ್‌, ಗಿಡ-ಗಂಟೆ ನೋಡಿ ಸಾಕಾಗಿದ್ದ ಜನ ಈಗ ಸಿಇಓ ಅವರ ಕಾರ್ಯವೈಖರಿಗೆ ಶಬ್ಬಹಾಸ್‌ ಹೇಳಿದ್ದಾರೆ. ಶಿವಶಂಕರ್‌ ಸರ್ಕಾರದಿಂದ ಹಣ ಪಡೆಯದೆ ನರೇಗಾ ಯೋಜನೆಯಿಂದ ಅದ್ಭುತವಾದ ಪಾರ್ಕ್‌ ನಿರ್ಮಾಣ ಇತರರಿಗೆ ಮಾದರಿಯಾಗಿದೆ.

Share Post