Anjanadri Issue: ತಿರುಮಲದಲ್ಲಿ ಹನುಮಂತನ ಜನ್ಮಸ್ಥಳ ಅಭಿವೃದ್ಧಿಗೆ ನಾಳೆ ಶಂಕುಸ್ಥಾಪನೆ
ತಿರುಪತಿ: ಹನುಮಂತನ ಜನ್ಮಸ್ಥಳ ಕೊಪ್ಪಳದ ಅಂಜನಾದ್ರಿ ಪರ್ವತ ಎಂಬುದು ಇದುವರೆಗೂ ನಂಬಿಕೊಂಡು ಬಂದ ವಿಚಾರ. ಆದ್ರೆ ಕೆಲ ತಿಂಗಳಿಂದ ಅಂಜೇನಯ ಜನ್ಮಸ್ಥಳ ತಿರುಪತಿ ತಿರುಮಲ ಬೆಟ್ಟ ಎಂಬ ವಾದ ಮಾಡಲಾಗುತ್ತಿದೆ. ಇದು ವಿವಾದ ಏರ್ಪಟ್ಟಿರುವಾಗಲೇ ತಿರುಮಲ ಬೆಟ್ಟದಲ್ಲಿ ಆಂಜನೇಯ ಜನ್ಮಸ್ಥಳದ ಅಭಿವೃದ್ಧಿಗೆ ಸಿದ್ಧತೆ ನಡೆಯುತ್ತಿದೆ. ನಾಳೆ ಇದಕ್ಕಾಗಿ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ಸಂಶೋಧಕರೊಬ್ಬರು ಆಂಜನೇಯನ ಜನ್ಮಸ್ಥಳ ತಿರುಪತಿ ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಈ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಸಿ ಸಾಕ್ಷ್ಯಗಳನ್ನು ಕಲೆಹಾಕುವಂತೆ ಟಿಟಿಡಿ ಆಡಳಿತ ಮಂಡಳಿ ಕಮಿಟಿಯೊಂದನ್ನು ರಚನೆ ಮಾಡಿತ್ತು. ಈ ಸಮಿತಿ ಕೂಡಾ ಆಂಜನೇಯನ ಜನ್ಮಸ್ಥಳ ತಿರುಮಲ ಬೆಟ್ಟವೇ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಇದರ ಅಭಿವೃದ್ಧ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಗುತ್ತಿದೆ.
ಈಗಾಗಲೇ ಶಂಕುಸ್ಥಾಪನೆಗೆ ಎಲ್ಲಾ ಸಿದ್ಧತೆಗಳೂ ನಡೆದಿವೆ. ಇದರ ಸಿದ್ಧತೆಗಳನ್ನು ಇಂದು ಟಿಟಿಡಿ ಅಧಿಕಾರಿ ಧರ್ಮಾರೆಡ್ಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ವರ್ಷ ಆಂಜನೇಯನ ಜನ್ಮ ಸ್ಥಳವನ್ನು ನಿರ್ಧರಿಸಿದ್ದ ಸಮಿತಿ, ಪುರಾಣ, ವಾಗ್ಮಯ, ಭೌಗೋಳಿಕ ಆಧಾರಗಳಿಂದ ತಿರುಮಲದ ಏಳು ಬೆಟ್ಟಗಳಲ್ಲಿ ಒಂದಾದ ಅಂಜನಾದ್ರಿಯಲ್ಲೇ ಆಂಜನೇಯ ಜನಿಸಿದ್ದಾನೆ ಎಂದು ಹೇಳಿದ್ದರು.
ತಿರುಮಲ ಬೆಟ್ಟದ ಆಕಾಶಗಂಗೆಯಲ್ಲಿ ನೂರಾರು ವರ್ಷಗಳ ಹಿಂದಿನ ಬಾಲ ಹನುಮಂತನ ವಿಗ್ರಹ ಇದೆ. 2016ರಲ್ಲಿ ಈ ಆಲಯವನ್ನು ಸ್ವಲ್ಪ ಅಭಿವೃದ್ಧಿ ಮಾಡಲಾಗಿತ್ತು. ಈಗ ಇನ್ನಷ್ಟು ಅಭಿವೃದ್ಧಿ ಮಾಡಬೇಕೆಂದು ಟಿಟಿಡಿ ನಿರ್ಧರಿಸಿದೆ. ಇದಕ್ಕಾಗಿ ನಾಳೆ ಶಂಕು ಸ್ಥಾಪನೆ ನೆರವೇರಿಸಲಾಗುತ್ತಿದೆ.
ಹನುಮಂತನ ಜನ್ಮ ರಹಸ್ಯ ಭಕ್ತರಿಗೆಲ್ಲಾ ತಿಳಿಯುವುದಕ್ಕಾಗಿ ಹಲವು ಫೋಟೋಗಳನ್ನು, ವಿಡಿಯೋಗಳನ್ನು, ಪುಸ್ತಕಗಳನ್ನು ಭಕ್ತರಿಗೆ ಪೂರೈಕೆ ಮಾಡಲು ವ್ಯವಸ್ಥೆ ಮಾಡಲಾಗುತ್ತಿದೆ. ಇನ್ನು ನಾಳೆ ಬೆಳಗ್ಗೆ ನಡೆಯುವ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹಲವು ಪೀಠಾಧಿಪತಿಗಳು ಆಗಮಿಸಲಿದ್ದಾರೆ ಎಂದು ಟಿಟಿಡಿ ಅಡಿಷನಲ್ ಈಒ ಧರ್ಮಾರೆಡ್ಡಿ ತಿಳಿಸಿದ್ದಾರೆ.