National

DAWOOD; ಭೂಗತ ಪಾತಕಿ ದಾವೂದ್‌ ಇಬ್ರಾಹಿಂಗೆ ಸಂಬಂಧಿಸಿದ ಆಸ್ತಿಗಳ ಮೇಲೆ ದಾಳಿ

ಮುಂಬೈ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ED) ಮಂಗಳವಾರ ಮುಂಜಾನೆ ಮುಂಬೈನಲ್ಲಿ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು. ದಾವೂದ್ ಇಬ್ರಾಹಿಂ ಸಹೋದರಿ, ಮೃತ ಹಸೀನಾ ಪಾರ್ಕರ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳ ತಂಡ ಮುಂಜಾನೆ ದಾಳಿ ನಡೆಸಿತು.

ಈ ವೇಳೆ ಹಲವಾರು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ದಾವೂದ್ ಇಬ್ರಾಹಿಂ ಜೊತೆಗಿನ ಸಂಪರ್ಕಕ್ಕಾಗಿ ಮಹಾರಾಷ್ಟ್ರದ ರಾಜಕಾರಣಿಯೊಬ್ಬರ ಮನೆ ಮೇಲೂ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. “ನಾವು ಮುಂಬೈ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹತ್ತು ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದೇವೆ. ಇದು ಗ್ಯಾಂಗ್‌ಸ್ಟರ್ ದಾವೂದ್ ಇಬ್ರಾಹಿಂ ಮತ್ತು ಅವನ ಸಹಚರರನ್ನು ಒಳಗೊಂಡ ಹಿಂದಿನ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದೆ. ಆಸ್ತಿ ವ್ಯವಹಾರದ ತನಿಖೆ ನಡೆಯುತ್ತಿದೆ, ಇದರಲ್ಲಿ ಮಹಾರಾಷ್ಟ್ರದ ಹಿರಿಯ ರಾಜಕಾರಣಿಯೂ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದೆ.

ದಾವೂದ್ ಈಗಲೂ ತನ್ನ ಮಧ್ಯವರ್ತಿಗಳ ಮೂಲಕ ಮುಂಬೈನಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು  ನಿಯಂತ್ರಿಸುತ್ತಿದ್ದಾನೆ. ಹವಾಲಾ ಜಾಲದ ಮೂಲಕ ಆತನಿಗೆ ಮತ್ತು ಆತನ ಸಹಾಯಕರಿಗೆ ಹಣ ರವಾನೆಯಾಗುತ್ತದೆ. ಈ ಹಣವನ್ನು ಭಾರತದಾದ್ಯಂತ ದೇಶ ವಿರೋಧಿ ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ನಡೆಸಲು ವಿವಿಧ ಭಯೋತ್ಪಾದಕ ಘಟಕಗಳು ಬಳಸುತ್ತಿವೆ ಎಂದು ಹೇಳಲಾಗುತ್ತಿದೆ.

Share Post