HIJAB ROW: ವಿದ್ಯಾಸಾಗರ್ ಶಾಲೆ ಶಿಕ್ಷಕಿ ಶಶಿಕಲಾ ರಾಜೀನಾಮೆ
ಬೆಂಗಳೂರು: ಹಿಜಾಬ್ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದಕ್ಕೆ ಕಾರಣವಾಗಿದ್ದ ಬೆಂಗಳೂರಿನ ಚಂದ್ರ ಲೇಔಟ್ ನಲ್ಲಿರುವ ವಿದ್ಯಾಸಾಗರ್ ಶಾಲೆಯ ಶಿಕ್ಷಕಿ ಶಶಿಕಲಾ ತಮ್ಮ ಕರ್ತವ್ಯಕ್ಕೆ ರಾಜೀನಾಮೆ ನೀಡಿದ್ದಾರೆ. ಶಾಲಾ ಆಡಳಿತ ಮಂಡಳಿಗೆ ಅವರು ತಮ್ಮ ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ ಎಂದು ಶಾಲೆಯ ಕಾರ್ಯದರ್ಶಿ ಡಾ.ರಾಜು ತಿಳಿಸಿದ್ದಾರೆ.
ಶಿಕ್ಷಕಿ ಶಶಿಕಲಾ ಅವರು ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ. ನನಗೆ ಅನಾರೋಗ್ಯ ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕೆಲಸಕ್ಕೆ ಬರಲು ಆಗುವುದಿಲ್ಲ ನನ್ನ ರಾಜೀನಾಮೆಯನ್ನು ಅಂಗೀರಿಸಿ ಎಂದು ಶಶಿಕಲಾ ಅವರು ಮನವಿ ಮಾಡಿಕೊಂಡಿದ್ದಾರೆಬ ಎಂದು ಕಾರ್ಯದರ್ಶಿ ಡಾ.ರಾಜು ಹೇಳಿದ್ದಾರೆ.
ಶನಿವಾರ ಶಾಲೆಯ ಬಳಿ ಗೊಂದಲದ ವಾತಾವರಣ ಉಂಟಾಗಿತ್ತು. ಶಿಕ್ಷಕಿ ಶಶಿಕಲಾ, ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅಲ್ಲದೆ, ಬೋರ್ಡ್ ಮೇಲೆ ಕೆಟ್ಟ ಭಾಷೆ ಬಳಸಿ, ಏನನ್ನೋ ಬರೆದಿದ್ದಾರೆ ಎಂದು ಪೋಷಕರು ಆರೋಪಿಸಿದ್ದರು. ಶಾಲೆಗೆ ನುಗ್ಗಿ ಗಲಾಟೆ ನಡೆಸಿದ್ದರು. ಈ ಕಾರಣದಿಂದಾಗಿ ಶಾಲೆ ಬಳಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದಾದ ಮೇಲೆ ಶಾಲಾ ಆಡಳಿತ ಮಂಡಳಿ ಶಿಕ್ಷಕಿ ಶಶಿಕಲಾ ಅವರನ್ನು ಅಮಾನತು ಮಾಡುವ ತೀರ್ಮಾನ ಕೈಗೊಂಡಿತ್ತು. ಅನಂತರ, ಹಿಂದೂ ಪರ ಸಂಘಟನೆಗಳ ಹೋರಾಟದ ನಂತರ ಅಮಾನತುನ್ನು ವಾಪಸ್ ಪಡೆಯಲಾಗಿದೆ ಎಂದು ಹೇಳಲಾಗಿತ್ತು. ಆದ್ರೆ, ಶಶಿಕಲಾ ಇಂದು ಶಾಲೆಗೆ ರಾಜೀನಾಮೆ ಪತ್ರವನ್ನು ಕಳುಹಿಸಿಕೊಟ್ಟಿದ್ದಾರೆ.
ಇನ್ನೊಂದೆಡೆ, ಶಾಂತಿ ಕಾಪಾಡುವ ನಿಟ್ಟಿನಲ್ಲಿ ಇಂದು ಪೋಲೀಸರು ಪೋಷಕರು ಹಾಗೂ ಶಾಲಾ ಆಡಳಿತ ಮಂಡಳಿ ಸದಸ್ಯರ ಜೊತೆ ಸಭೆ ನಡೆಸಿದರು. ಪೋಷಕರ ಮನೆಯೊಂದರಲ್ಲಿ ಸಭೆ ಸೇರಿ, ಶಾಂತಿ ಕಾಪಾಡುವ ಬಗ್ಗೆ ಮಾತುಕತೆ ನಡೆಸಲಾಯಿತು.