ಒಂದು ಕ್ರೇಟ್ ಮಾವು ಬರೋಬ್ಬರಿ 31 ಸಾವಿರ ರೂ.ಗೆ ಮಾರಾಟ..!
ಪುಣೆ (ಮಹಾರಾಷ್ಟ್ರ): ಪುಣೆಯ ಎಪಿಎಂಸಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ಕ್ರೇಟ್ ಒಂದು 31,000 ರೂ.ಗಳಿಗೆ ಹರಾಜಾಗಿ ದಾಖಲೆಗೆ ಕಾರಣವಾಗಿದೆ. ಕಳೆದ ವರ್ಷಗಳಲ್ಲಿ ಅತ್ಯಂತ ದುಬಾರಿ ಬೆಲೆಗೆ ಮಾವಿನ ಹಣ್ಣಿನ ಕ್ರೇಟ್ ಮಾರಾಟವಾಗಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಮಾವಿನ ಹಂಗಾಮು ಶುರುವಾಗುತ್ತಿದ್ದು, ಈ ಋತುವಿನಲ್ಲಿ ಮೊದಲ ಬಾರಿಗೆ ಪುಣೆಯ ಎಪಿಎಂಸಿ ಮಾರುಕಟ್ಟೆಗೆ ಮಾವು ಲಗ್ಗೆ ಇಟ್ಟಿದೆ. ಹೀಗಾಗಿ ವ್ಯಾಪಾರಿಗಳು ಹೂವು ಹಾಕಿ ಪೂಜೆ ಮಾಡಿ, ಉತ್ತಮ ವ್ಯಾಪಾರವಾಗಲಿ ಎಂದು ಕೈಮುಗಿದು ಬೇಡಿದರು. ಅನಂತರ ಕ್ರೇಟ್‌ಗಳ ಹರಾಜು ನಡೆಯಿತು. ಈ ವೇಳೆ ಒಂದು ಮಾವಿನ ಕ್ರೇಟ್ ಒಂದು 31 ಸಾವಿರ ರೂಪಾಯಿಗೆ ಮಾರಾಟವಾಯಿತು.
ದೇವಗಡ ರತ್ನಗಿರಿಯಿಂದ ಶುಕ್ರವಾರ ಪುಣೆಯ ಎಪಿಎಂಸಿ ಮಾರುಕಟ್ಟೆಗೆ ಪ್ರಸಿದ್ಧ ಹ್ಯಾಪಸ್ ಮಾವಿನ ಮೊದಲ ಬಾಕ್ಸ್ ಆಗಮಿಸಿದೆ. ವರ್ತಕ ಯುವರಾಜ್ ಕಚ್ಚಿ ಮಾತನಾಡಿ, ‘ಇವು ಈ ಋತುವಿನ ಆರಂಭದ ಮಾವಿನ ಹಣ್ಣುಗಳು, ಮುಂದಿನ ಎರಡು ತಿಂಗಳ ವ್ಯಾಪಾರದ ಭವಿಷ್ಯವನ್ನು ನಿರ್ಧರಿಸುವ ಕಾರಣದಿಂದ ಪ್ರತಿ ವರ್ಷವೂ ಈ ಆರಂಭಿಕ ಮಾವುಗಳನ್ನು ಶಾಸ್ತ್ರೋಕ್ತವಾಗಿ ಹರಾಜು ಮಾಡಲಾಗುತ್ತದೆ. ಈ ವೇಳೆ ಅತಿ ಹೆಚ್ಚು ಬೆಲೆಗೆ ಮಾವು ಮಾರಾಟವಾಗಿದೆ ಎಂದು ಹೇಳಿದ್ದಾರೆ.
ಈ ಮಾವಿನ ಹಣ್ಣನ್ನು ಖರೀದಿಸಲು ಹರಾಜನ್ನು ಆಯೋಜಿಸಲಾಗಿದ್ದು, 5,000 ರೂ.ಗಳಿಂದ ಪ್ರಾರಂಭವಾದ ಬಿಡ್ 31,000 ರೂ.ಗೆ ಮುಟ್ಟಿತು. ಮಾವಿನ ಮೊದಲ ಕ್ರೇಟ್ 18,000 ರೂ., ಎರಡನೆಯದು 21,000 ರೂ., ಮೂರನೇ 22,500 ರೂ. ಮತ್ತು ನಾಲ್ಕನೇ ಕ್ರೇಟ್ 22,500 ರೂ.ಗೆ ಬಿಡ್ ಆಗಿದೆ ಎಂದು ವ್ಯಾಪಾರಿ ಹೇಳಿದರು. ಐದನೇ ಕ್ರೇಟ್ 31,000 ರೂ.ಗೆ ಮಾರಾಟವಾಗಿದೆ. ಕಳೆದ 50 ವರ್ಷಗಳಲ್ಲಿ ಇದು ಪುಣೆ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಬಿಡ್ ಆಗಿದೆ” ಎಂದು ವ್ಯಾಪಾರಿ ಹೇಳಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ COVID-19 ಸಾಂಕ್ರಾಮಿಕ ಸಮಯದಲ್ಲಿ, ವ್ಯಾಪಾರವು ಕಡಿಮೆಯಾಗಿದೆ ಮತ್ತು ವ್ಯಾಪಾರಿಗಳು ನಷ್ಟವನ್ನು ಅನುಭವಿಸಿದ್ದಾರೆ ಎಂದು ವ್ಯಾಪಾರಿ ಹೇಳಿದರು. ಆದರೆ ಈ ವರ್ಷ ಉತ್ತಮ ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದೇವೆ ಎಂದು ವ್ಯಾಪಾರಿಯೊಬ್ಬರು ಹೇಳಿದ್ದಾರೆ.