International

HIJAB: ಹಿಜಾಬ್‌ ಬಗ್ಗೆ ಪ್ರಪಂಚದಾದ್ಯಂತ ಇರುವ ವಿವಾದಗಳೇನು..? ಯಾವ ದೇಶಗಳಲ್ಲಿ ನಿಷೇಧವಿದೆ..?

ಕರ್ನಾಟಕದ ಕಾಲೇಜೊಂದರಲ್ಲಿ ಶುರುವಾದ ಹಿಜಾಬ್‌ ವಿವಾದ ಈಗ ದೇಶಾದ್ಯಂತ ವ್ಯಾಪಿಸುತ್ತಿದೆ. ಈ ವಿವಾದ ಕೋರ್ಟ್‌ ಮೆಟ್ಟಿಲು ಕೂಡಾ ಏರಿದೆ. ಹಿಜಾಬ್‌ ಸಂವಿಧಾನ ನೀಡಿರುವ ಹಕ್ಕು ಎಂದು ಕೆಲವರು ಹೇಳುತ್ತಿದ್ದರೆ, ಶಾಲೆ-ಕಾಲೇಜುಗಳಲ್ಲಿ ಧರ್ಮದ ಚಿಹ್ನೆಗಳಿಗೆ ಅವಕಾಶ ನೀಡಬಾರದು ಎಂದು ಕೆಲವರು ಹೇಳುತ್ತಿದ್ದಾರೆ.

ಅಂದಹಾಗೆ, ಪ್ರಪಂಚದಾದ್ಯಂತ ಹಿಜಾಬ್‌ ಹಾಗೂ ನಿಖಾಬ್‌ಗಳಿಗೆ ಹಲವು ವಿಧವಾದ ನಿಂಬಂಧನೆಗಳಿವೆ, ಕೆಲವು ದೇಶಗಳಲ್ಲಿ ಬಹಿರಂಗ ಪ್ರದೇಶಗಳಲ್ಲಿ ಮುಖವನ್ನು ಮುಚ್ಚಿಕೊಳ್ಳುವುದು ಅಥವಾ ನಿಖಾಬ್‌ ಧರಿಸುವುದಕ್ಕೆ ನಿಷೇಧವಿದೆ. ಹಾಗಾದರೆ ಯಾವ ದೇಶದಲ್ಲಿ ಯಾವ ರೀತಿಯ ನಿಷೇಧಗಳನ್ನು ಹೇರಲಾಗಿದೆ..? ನೋಡೋಣ ಬನ್ನಿ..

ಫ್ರಾನ್ಸ್‌:

ಬಹಿರಂಗ ಪ್ರದೇಶದಲ್ಲಿ ಮುಖವನ್ನು ಪೂರ್ತಿಯಾಗಿ ಮುಚ್ಚುವ ನಿಖಾಬ್‌ಗಳನ್ನು ಧರಿಸಬಾರದೆಂದು 2011 ಏಪ್ರಿಲ್‌ 11ರಂದು ಪ್ರಾನ್ಸ್‌ ದೇಶದ ಹೊಸ ಕಾನೂನು ತಂದಿತು. ನಿಖಾಬ್‌ಗಳ ಮೇಲೆ ನಿಷೇಧ ವಿಧಿಸಿದ ಮೊದಲ ಯೂರೋಪಿಯನ್‌ ದೇಶವಿದು. ಫ್ರಾನ್ಸ್‌ ಮಹಿಳೆಯಾದರೂ, ವಿದೇಶಿ ಮಹಿಳೆಯಾದರೂ ಮನೆಯಿಂದ ಹೊರಗೆ ಬಂದ ಮೇಲೆ ನಿಖಾಬ್‌ ಧರಿಸುವುದಕ್ಕೆ ಇಲ್ಲಿ ನಿಷೇಧವಿದೆ. ಉಲ್ಲಂಘಿಸಿದರೆ ಭಾರಿ ದಂಡ ವಿಧಿಸಲಾಗುತ್ತದೆ.

ಬೆಲ್ಜಿಯಂ
ಇಲ್ಲಿ 2011ರಲ್ಲಿ ಮುಖವನ್ನು ಮುಚ್ಚುವ ನಿಖಾಬ್‌ಗಳನ್ನು ನಿಷೇಧಿಸಲಾಯಿತು. 2011 ಜುಲೈನಲ್ಲಿ ತಂದ ಕಾನೂನಿನ ಪ್ರಕಾರ ಬಹಿರಂಗ ಪ್ರದೇಶಗಳಲ್ಲಿ ವ್ಯಕ್ತಿಗಳ ಗುರುತುಗಳನ್ನು ಮರೆಮಾಚುವ ಎಂತಹ ಬಟ್ಟೆಗಳನ್ನು ಕೂಡಾ ಧರಿಸಬಾರದು. ಆದ್ರೆ, ಇದಕ್ಕೆ ವಿರೋಧ ವ್ಯಕ್ತವಾಗಿತ್ತು. ಕೆಲವರು ಕೋರ್ಟ್‌ ಮೆಟ್ಟಿಲೇರಿದ್ದರು. ಆದ್ರೆ ಕೋರ್ಟ್‌, ಸಾರ್ವಜನಿಕರ ಮನವಿಯಲ್ಲಿ ತಿರಸ್ಕರಿಸಿತ್ತು. 2017ರಲ್ಲಿ ಯೂರೋಪಿಯನ್‌ ಕೋರ್ಟ್‌ ಆಪ್‌ ಹ್ಯೂಮನ್‌ ರೈಟ್ಸ್‌ ಕೂಡಾ ಬೆಲ್ಜಿಯಂ ಕಾನೂನನ್ನು ಸಮರ್ಥಿಸಿತ್ತು.

ನೆದರ್ಲೆಂಡ್‌

ಶಾಲೆಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ ಪ್ರದೇಶಗಳಲ್ಲಿ, ಸಾರ್ವಜನಿಕ ಪ್ರಯಾಣ ಸ್ಥಳಗಳಲ್ಲಿ ಮುಖವನ್ನು ಮುಚ್ಚುವ ಪರದೆಗಳನ್ನು ಧರಿಸಬಾರದು ಎಂದು 2016 ನವೆಂಬರ್‌ನಲ್ಲಿ ನೆದರ್ಲೆಂಡ್‌ ಸರ್ಕಾರ ಹೊಸ ತೀರ್ಮಾನ ಪ್ರಕಟಿಸಿತು. ಆದರೆ, ಈ ತೀರ್ಮಾನವನ್ನು ಕಾನೂನಾನಿ ಬದಲಾಯಿಸಬೇಕೆಂದರೆ ಅಲ್ಲಿನ ಪಾರ್ಲಿಮೆಂಟ್‌ನಲ್ಲಿ ಬಿಲ್ಲು ಮಂಡಿಸಬೇಕು. ಅಲ್ಲಿ ಅನುಮೋದನೆ ಸಿಗಬೇಕು. ಹೀಗಾಗಿ ಎರಡು ವರ್ಷಗಳ ನಂತರ 2018 ಜೂನ್‌ನಲ್ಲಿ ಈ ಕಾನೂನಿಗೆ ನೆದರ್ಲೆಂಡ್‌ ಸಂಸತ್ತು ಅನುಮೋದನೆ ನೀಡಿ, ಅದನ್ನು ಕಾನೂನಾಗಿ ಜಾರಿಗೆ ತಂದಿತು.

ಇಟಲಿ
ಇಟಲಿಯ ನೋವಾರಾ ಮುಂತಾದ ನಗರಗಳಲ್ಲಿ ನಿಖಾಬ್‌ ಮೇಲೆ ನಿಷೇಧವಿದೆ. ಹಾಗೆಯೇ, ಲೊಂಬಾರ್ಡ್‌ ಪ್ರಾಂತ್ಯದಲ್ಲಿ 2016ರ ಜನವರಿಯಿಂದ ಬುರ್ಖಾಗಳ ಮೇಲೆ ನಿಷೇಧ ಹೇರಲಾಗಿದೆ. ಆದ್ರೆ ಈ ಕಾನೂನು ಇಡೀ ದೇಶಕ್ಕೆ ಅನ್ವಯಿಸುವುದಿಲ್ಲ.

ಜರ್ಮನಿ
ಜರ್ಮಿನಿಯಲ್ಲಿ ಇಡೀ ದೇಶಕ್ಕೆ ಅನ್ವಯಿಸುವ ಯಾವುದೇ ಕಾನೂನಿಲ್ಲ. ಆದ್ರೆ ಡ್ರೈವಿಂಗ್‌ ಮಾಡುವಾಗ ಮಾತ್ರ ಮುಖಕ್ಕೆ ಪರದೆ ಧರಿಸಬಾರದೆಂಬ ನಿಯಮವಿದೆ. ಇನ್ನು ಇಲ್ಲಿನ ಕೆಲ ರಾಜ್ಯಗಳಲ್ಲಿ ಶಿಕ್ಷಕಿಯರು ನಿಖಾಬ್‌ ಧರಿಸಬಾರದೆಂಬ ನಿಯಮವಿದೆ. ಇನ್ನೂ ಕೆಲವು ರಾಜ್ಯಗಳಲ್ಲಿ ಶಾಲೆಗಳು, ಯೂನಿವರ್ಸಿಟಿಗಳು, ಸರ್ಕಾರಿ ಕಚೇರಿಗಳಲ್ಲಿ ಮುಖ ಮುಚ್ಚಿರುವ ಪರದೆಗಳಿಗೆ ನಿಷೇಧವಿದೆ. ಆದರೂ ಕೆಲವೆಡೆ ಮಹಿಳೆಯರು ನಿಖಾಬ್‌ ಧರಿಸುವುದಕ್ಕೆ ಅವಕಾಶವಿದ್ದು, ಸಂಬಂಧಪಟ್ಟವರು ಕೇಳಿದಾಗ ಮುಖವನ್ನು ತಪ್ಪದೇ ತೋರಸಬೇಕಾಗುತ್ತದೆ.

ಆಸ್ಟ್ರಿಯಾ
ಶಾಲೆಗಳು, ನ್ಯಾಯಸ್ಥಾನಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ನಿಖಾಬ್‌ ಧರಿಸಬಾರದೆಂದು 2017 ಅಕ್ಟೋಬರ್‌ನಲ್ಲಿ ಆಸ್ಟ್ರಿಯಾ ಸರ್ಕಾರ ಕಾನೂನು ಜಾರಿಗೆ ತಂದಿದೆ.

ನಾರ್ವೇ
2018 ಜೂನ್‌ನಲ್ಲಿ ನಾರ್ವೇಯಲ್ಲಿ ಶಾಲಾ ಕಾಲೇಜುಗಳಲ್ಲಿ ನಿಖಾಬ್‌ ಧರಿಸುವುದನ್ನು ನಿಷೇಧಿಸಲಾಯಿತು.

ಸ್ಪೇನ್‌
ಸ್ಪೇನ್‌ನಲ್ಲಿ ನಿಖಾಬ್‌ ಧರಿಸುವುದರ ಮೇಲೆ ಯಾವುದೇ ರಾಷ್ಟ್ರೀಯ ಕಾನೂನುಗಳಿಲ್ಲ. ಆದರೆ, ಬಾರ್ಸಿಲೋನಾ ನಗರದ ಮುನ್ಸಿಪಲ್‌ ಕಾರ್ಯಾಲಯಗಳು, ಲೈಬ್ರರಿಗಳಂತಹ ಬಹಿರಂಗ ಪ್ರದೇಶಗಳಲ್ಲಿ ನಿಖಾಬ್‌ ಧರಿಸಬಾರದೆಂಬ ಕಾನೂನು 2010ರಿಂದ ಇದೆ. ಲಿಡಾ ನಗರದಲ್ಲಿ ಕೂಡಾ ಇಂತಹದ್ದೇ ಕಾನೂನು ತರಲಾಗಿದೆ. ಆದ್ರೆ ಇದು ಮತ ಸ್ವೇಚ್ಛೆಗೆ ಭಂಗ ತರುತ್ತದೆ ಎಂದು ಸ್ಪೈನ್‌ ಸುಪ್ರೀಂ ಕೋರ್ಟ್‌ 2013 ಫೆಬ್ರವರಿಯಲ್ಲಿ ಈ ಕಾನೂನನ್ನು ತಿರಸ್ಕರಿಸಿತು.

ಬ್ರಿಟನ್‌
ಬ್ರಿಟನ್‌ನಲ್ಲಿ ಇಸ್ಲಾಮಿಕ್‌ ಉಡುಗೆಗಳ ಮೇಲೆ ಯಾವುದೇ ನಿರ್ಬಂಧಗಳಿಲ್ಲ. ಆದರೆ, ವಿದ್ಯಾರ್ಥಿಗಳಿಗೆ ಡ್ರೆಸ್‌ ಕೋಡ್‌ ನಿರ್ಣಯ ಮಾಡುವ ಹಕ್ಕು ಆಯಾ ವಿದ್ಯಾಸಂಸ್ಥೆಗಳಿಗೆ ನೀಡಲಾಗಿದೆ. ಆದರೂ, 2016 ಆಗಸ್ಟ್‌ನಲ್ಲಿ ಮಾಡಲಾದ ಒಂದು ಪೋಲ್‌ನಲ್ಲಿ ಬುರ್ಖಾ ನಿಷೇಧ ಮಾಡಬೇಕೆಂದು ಶೇಕಡಾ 57 ಮಂದಿ ಮತ ಹಾಕಿದ್ದರು.

ಆಫ್ರಿಕಾ
ಆಫ್ರಿಕಾದಲ್ಲಿ 2015ರಲ್ಲಿ ಬುರ್ಖಾ ಧರಿಸಿದ ಕೆಲವು ಮಹಿಳೆಯರು ಆತ್ಮಾಹುತಿ ದಾಳಿ ನಡೆಸಿದ್ದರು. ಈ ಕಾರಣದಿಂದಾಗಿ ಚಾಡ್‌, ಕೆಮರೂನ್‌ ಉತ್ತರ ಪ್ರಾಂತ್ಯ, ನೈಜರ್‌ನ ಕೆಲವು ಪ್ರಾಂತ್ಯಗಳು, ಡೆಮಾಕ್ರಟಿಕ್‌ ರಿಪಬ್ಲಿಕ್‌ ಆಫ್‌ ಕಾಂಗೋದಲ್ಲಿ ಮುಖವನ್ನು ಮುಚ್ಚಿರುವ ಪರದೆಗಳನ್ನು ನಿಷೇಧಿಸಲಾಗಿದೆ.

ಡೆನ್ಮಾರ್ಕ್‌
2018ರಲ್ಲಿ ಮುಖವನ್ನು ಪೂರ್ತಿಯಾಗಿ ಮುಚ್ಚುವ ನಿಖಾಬ್‌ ಗಳ ಮೇಲೆ ನಿಷೇಧ ಹೇರಲಾಗಿದೆ. ಈ ನಿಯಮವನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತದೆ. ಎರಡನೇ ಬಾರಿ ಕೂಡಾ ಉಲ್ಲಂಘನೆ ಮಾಡಿದರೆ ಮೊದಲ ಬಾರಿಗಿಂತ ಹತ್ತು ಪಟ್ಟು ಹೆಚ್ಚು ದಂಡ ವಿಧಿಸಲಾಗುತ್ತದೆ. ಜೊತೆಗೆ ಆರು ತಿಂಗಳುಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಬುರ್ಖಾ ಧರಿಸಲೇಬೇಕು ಎಂದು ಯಾರಾದರೂ ಬಲವಂತ ಮಾಡಿದರೆ ಅವರಿಗೂ ದಂಡ ಹಾಗೂ ಎರಡು ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ರಷ್ಯಾ
ರಷ್ಯಾದಲ್ಲಿ ಸ್ವಾಟ್ರೋಪೋಲ್‌ ಪ್ರಾಂತ್ಯದಲ್ಲಿ ಹಿಜಾಬ್‌ ಧರಿಸುವುದಕ್ಕೆ ನಿಷೇಧವಿದೆ. ರಷ್ಯಾದಲ್ಲಿ ಇಂತಹ ಇದೇ ಮೊದಲ ಬಾರಿ ತಂದಿರೋದು. 2013ರ ಜುಲೈನಲ್ಲಿ ರಷ್ಯಾ ಸುಪ್ರೀಂ ಕೋರ್ಟ್‌ ನಿರ್ಧಾರವನ್ನು ಸಮರ್ಥಿಸಿತು.

 

Share Post