ಯೋಗಿ ಸರ್ಕಾರಕ್ಕೆ ಭಾರಿ ಜನಬೆಂಬಲವಿದೆ; ಕೇಂದ್ರ ಸಚಿವ ಅನುರಾಗ್ ಠಾಕೂರ್
ವಾರಾಣಸಿ: ಉತ್ತರ ಪ್ರದೇಶದಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆಯ ಮತದಾನ ಮುಕ್ತಾಯವಾಗಿದೆ. ಈಗ ಎರಡನೇ ಹಂತದಲ್ಲಿ ಮತದಾನ ನಡಸೆಯುವ ಕ್ಷೇತ್ರಗಳಲ್ಲಿ ಮತ ಬೇಟೆ ಜೋರಾಗಿ ನಡೆಯುತ್ತಿದೆ. ಇಂದು ವಾರಾಣಸಿಯ ಸಿಗ್ರಾದಲ್ಲಿ ಕೇಂದ್ರ ಸಚಿವ ಅನುರಾಗ್ ಠಾಕೂರ್, ಮನೆಗೂ ಮನೆಗೂ ತೆರಳಿ ಬಿಜೆಪಿ ಪರ ಪ್ರಚಾರ ನಡೆಸಿದರು.
ಈ ವೇಳೆ ಮಾತನಾಡಿದ ಅನುರಾಗ್ ಠಾಕೂರ್ ಅವರು, ಗೂಂಡಾರಾಜ್, ಮಾಫಿಯಾ ರಾಜ್ನಿಂದ ರಾಜ್ಯವನ್ನು ಮುಕ್ತಗೊಳಿಸಲು ಯೋಗಿ ಸರ್ಕಾರದ ಕೆಲಸವನ್ನು ನೋಡಿದ ಯುಪಿ ಜನರು ಯೋಗಿಯನ್ನು ಮತ್ತೆ ಅಧಿಕಾರಕ್ಕೆ ತರಲು ಮತ ಹಾಕುತ್ತಿದ್ದಾರೆ. ಕೈರಾನಾದಿಂದ ಕಾಶಿಯವರೆಗೆ ಈ ಅಲೆ ದ್ವಿಗುಣಗೊಳ್ಳಲಿದ್ದು, ಬಿಜೆಪಿಗೆ ಬೆಂಬಲ ಸಿಗಲಿದೆ. ಸೀಟುಗಳ ಸಂಖ್ಯೆ ಹೆಚ್ಚಾಗಲಿದೆ. ಯುಪಿಯಲ್ಲಿ ಬಿಜೆಪಿಗೆ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದರು.
ಡಬಲ್ ಇಂಜಿನ್ ಸರ್ಕಾರ ಕಳೆದ ಐದು ವರ್ಷಗಳಲ್ಲಿ ರೈತರ 36 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಿದೆ. ಕಬ್ಬು ಬೆಳೆಗಾರರಿಗೆ ಸಕಾಲದಲ್ಲಿ ಹಣ ಪಾವತಿ ಮಾಡಲಾಗುತ್ತಿದೆ. ಉತ್ತರ ಪ್ರದೇಶದ ರೈತರು, ಯುವಕರು ಮತ್ತು ಮಹಿಳೆಯರು ನಿನ್ನೆ ಬಹಿರಂಗವಾಗಿ ಬಿಜೆಪಿಗೆ ಮತ ಹಾಕಿದ್ದಾರೆ. ಮುಜಾಫರ್ಪುರದಿಂದ ಮಾವುವರೆಗೆ ಗಲಭೆಗಳು ನಡೆಯುತ್ತಿದ್ದವು. ಆದರೆ ಕಳೆದ 5 ವರ್ಷಗಳಲ್ಲಿ ಯಾವುದೇ ಗಲಭೆಗಳು ನಡೆದಿಲ್ಲ. ನಮ್ಮ ಪ್ರಣಾಳಿಕೆಯಲ್ಲಿ ವೃದ್ಧರು, ವಿಧವೆಯರು, ಅಂಗವಿಕಲರು ಎಲ್ಲರಿಗೂ 1500 ರೂಪಾಯಿ ಪಿಂಚಣಿ ನೀಡುವುದಾಗಿ ಹೇಳಿದ್ದೇವೆ. 2 ಕೋಟಿ ವಿದ್ಯಾರ್ಥಿಗಳಿಗೆ ಸ್ಮಾರ್ಟ್ಫೋನ್ ಮತ್ತು ಟ್ಯಾಬ್ಲೆಟ್ಗಳನ್ನು ನೀಡಲಾಗುವುದು, ವಿದ್ಯಾರ್ಥಿನಿಯರಿಗೆ ಸ್ಕೂಟಿ ನೀಡಲಾಗುವುದು ಎಂದು ಅನುರಾಗ್ ಠಾಕೂರ್ ಹೇಳಿದರು.