ಜಲ ವಿವಾದದ ಬಗ್ಗೆ ಸಿಎಂ ಚರ್ಚೆ; ಸಂಪುಟದ ಬಗ್ಗೆ ನಡ್ಡಾ ಜೊತೆ ಚರ್ಚೆ
ನವದೆಹಲಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಇಂದು ನವದೆಹಲಿಯಲ್ಲಿ ಅಂತರರಾಜ್ಯ ಜಲ ವಿವಾದ ಕುರಿತು ಕಾನೂನು ತಜ್ಞರೊಂದಿಗೆ ಸಭೆ ನಡೆಯಿತು. ನವದೆಹಲಿಯ ಕರ್ನಾಟಕ ಭವನದಲ್ಲಿ ನಡೆ ಸಭೆ ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಮಾತನಾಡಿದರು. ಸಭೆಯಲ್ಲಿ ಅಂತರಾಜ್ಯ ಜಲವಿವಾದಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಕೃಷ್ಣಾ ನ್ಯಾಯಾಧಿಕರಣದ ಆದೇಶದ ಅಧಿಸೂಚನೆಗೆ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಲಾಗುವುದು. ಸುಪ್ರೀಂಕೋರ್ಟ್ ನಲ್ಲಿ ಅಧಿಸೂಚನೆ ಹೊರಡಿಸುವ ಬಗ್ಗೆ ವಿಚಾರಣೆಗೆ ನ್ಯಾಯಾಧೀಶರ ನೇಮಕ ಮಾಡಬೇಕು. ಇಲ್ಲದಿದ್ದರೆ ಓಪನ್ ಕೋರ್ಟ್ ನಲ್ಲಿ ಮೆನ್ಷನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.
ಮೇಕೆದಾಟು ವಿಚಾರವಾಗಿ ನಮ್ಮ ನಿಲುವು ಗಟ್ಟಿ ಮಾಡಿಕೊಂಡಿದ್ದೇವೆ. ತಮಿಳುನಾಡಿನ ಗುಂಡಾರು ವೈಗಾರ್ ಯೋಜನೆಗೆ ವಿರೋಧವಿದೆ. ಹೈಡ್ರೋ ಪವರ್ ಯೋಜನೆಗೂ ವಿರೋಧ ಮಾಡಲು ನಿರ್ಧರಿಸಿದ್ದೇವೆ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು. ಕಾವೇರಿ ನಿಯಂತ್ರಣ ಪ್ರಾಧಿಕಾರದಲ್ಲಿ ಮೇಕೆದಾಟು ಯೋಜನೆ ಚರ್ಚೆಯಾಗಬೇಕು. ಮುಂದೆ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡಲಿದ್ದೇವೆ. ಇನ್ನು ಮಹದಾಯಿ ಬಗ್ಗೆ ಚರ್ಚೆಯಾಗಿದೆ. ಕೋರ್ಟ್ ನಲ್ಲಿ ಬೇಗ ವಿಚಾರಣೆ ನಡೆಯಬೇಕಿದೆ ಎಂದು ಹೇಳಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನು ಭೇಟಿ ಮಾಡಿದೇನೆ. ಅಗ್ರೆಸ್ಸಿವ್ ಆಗಿ ಕೆಲಸ ಮಾಡುವಂತೆ ಹೇಳಿದ್ದಾರೆ. ಬಜೆಟ್ ಮತ್ತು ಅಭಿವೃದ್ಧಿ ಕೆಲಸ ವಿಚಾರದಲ್ಲಿ ಅಗ್ರೆಸ್ಸಿವ್ ಇರಲಿ ಎಂದಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ನಡ್ಡಾ ಅವರನ್ನು ಭೇಟಿ ಮಾಡುವಂತೆ ಹೇಳಿದ್ದಾರೆ ಎಂದು ಬೊಮ್ಮಾಯಿಯವರು ಹೇಳಿದ್ದಾರೆ.
ಸಭೆಯಲ್ಲಿ ಸಚಿವರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಮುಖ್ಯಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ ಪ್ರಸಾದ್ ರಾಜ್ಯ ಸರ್ಕಾರದ ಅಡ್ವೋಕೆಟ್ ಜನರಲ್ ಪ್ರಭುಲಿಂಗ ನಾವದಗಿ ಹಾಗೂ ಹಿರಿಯ ಕಾನೂನು ತಜ್ಞರು ಸಭೆಯಲ್ಲಿ ಉಪಸ್ಥಿತರಿದ್ದರು.