ಸಂಪುಟ ವಿಸ್ತರಣೆ ವಿಚಾರ; ಇಂದು ಸಿಎಂ ಬೊಮ್ಮಾಯಿ ದೆಹಲಿಗೆ
ನವದೆಹಲಿ: ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆಗಾಗಿ ಆಗ್ರಹಗಳು ಹೆಚ್ಚಾಗುತ್ತಿವೆ. ಈ ಬೆನ್ನಲ್ಲೇ ಸಿಎಂ ಬಸವರಾಜ ಬೊಮ್ಮಾಯಿ ಇಂದು ದೆಹಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಅಧಿಕೃತ ಕಾರ್ಯಕ್ರಮವೊಂದಕ್ಕೆ ಭೇಟಿ ನೀಡುತ್ತಿದ್ದರೂ, ಸಿಎಂ ವರಿಷ್ಠರ ಬಳಿ, ಸಂಪುಟದ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಕುತೂಹಲ ಗರಿಗೆದರಿದೆ.
ಒಂದು ಕಡೆ ಸಿಡಿ ಕೇಸ್‌ನಲ್ಲಿ ಎಸ್‌ಐಟಿ ರಮೇಶ್ ಜಾರಕಿಹೊಳಿಗೆ ಕ್ಲೀನ್ ಚಿಟ್ ನೀಡಿದೆ. ಹೀಗಾಗಿ ರಮೇಶ್ ಜಾರಕಿಹೊಳಿ ಮತ್ತೆ ಸಂಪುಟಕ್ಕೆ ಸೇರಲು ಒತ್ತಡ ತಂತ್ರ ಶುರು ಮಾಡಿದ್ದಾರೆ. ಮೊನ್ನೆಯಷ್ಟೇ ಗೋವಾದಲ್ಲಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರಲು ಮನವಿ ಮಾಡಿರೋದಾಗಿ ತಿಳಿದುಬಂದಿದೆ. ಇನ್ನು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಕೂಡಾ ಸಚಿವ ಸ್ಥಾನಕ್ಕಾಗಿ ದೊಡ್ಡ ಲಾಬಿ ಶುರು ಮಾಡಿದ್ದಾರೆ. ಜೊತೆಗೆ ಹಲವು ಸಚಿವರ ವಿರುದ್ಧ ಹೈಕಮಾಂಡ್‌ಗೆ ದೂರು ಕೂಡಾ ನೀಡಿದ್ದಾರೆ.
ಇನ್ನು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಹಲವು ಶಾಸಕರು ಸಚಿವಗಿರಿಗಾಗಿ ಭಾರಿ ಒತ್ತಡ ತರುತ್ತಿದ್ದಾರೆ. ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಮಾಡುವುದಾದರೆ ಈಗಾಲೇ ಮಾಡಿ. ಇನ್ನು ನಾಲ್ಕೈದು ತಿಂಗಳು ಬಿಟ್ಟು ಮಾಡುವುದಾದರೆ ಮಾಡಿದರೂ ವೇಸ್ಟ್ ಎಂದು ಹೇಳುತ್ತಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಬೊಮ್ಮಾಯಿ ದೆಹಲಿ ಭೇಟಿ ಕುತೂಹಲಕ್ಕೆ ಕಾರಣವಾಗಿದೆ. ಬೊಮ್ಮಾಯಿಯವರು ಎರಡು ದಿನ ದೆಹಲಿಯಲ್ಲಿರಲಿದ್ದು, ಹೈಕಮಾಂಡ್‌ನ ಹಲವು ನಾಯಕರನ್ನು ಭೇಟಿಯಾಗಲಿದ್ದಾರೆ. ಇನ್ನೊಂದೆಡೆ, ರೇಣುಕಾಚಾರ್ಯ ಕೂಡಾ ಇಂದು ದೆಹಲಿಗೆ ಹೋಗುತ್ತಿದ್ದಾರೆ. ಇಂದಿನಿಂದ ಮೂರು ದಿನಗಳ ಕಾಲ ಅವರು ದೆಹಲಿಯಲ್ಲೇ ಇರಲಿದ್ದಾರೆ. ಅರುಣ್ ಸಿಂಗ್ ಅವರು ಬುಲಾವ್ ನೀಡಿದ್ದರಿಂದಾಗಿ ರೇಣುಕಾಚಾರ್ಯ ದೆಹಲಿ ಪ್ರವಾಸ ಕೈಗೊಂಡಿದ್ದಾರೆ.