ಪೊಲೀಸ್ ಶಾಲೆಗಳನ್ನು ಆತ್ಮರಕ್ಷಣಾ ತರಬೇತಿಗೆ ಬಳಕೆ-ಬಸವರಾಜ ಬೊಮ್ಮಾಯಿ
ಬೆಂಗಳೂರು: ಪೊಲೀಸ್ ತರಬೇತಿ ಶಾಲೆಗಳನ್ನು ಮಹಿಳಾ ಆತ್ಮರಕ್ಷಣಾ ತರಬೇತಿಗೆ ಬಳಕೆ ಮಾಡುವಂತೆ ಗೃಹ ಇಲಾಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಓಬವ್ವ ಆತ್ಮ ರಕ್ಷಣಾ ಕಲೆಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾಕಾಲೇಜುಗಳ ಮಕ್ಕಳಿಗೆ ಆತ್ಮರಕ್ಷಣಾ ತರಬೇತಿಯನ್ನು ಶೀಘ್ರ ದಲ್ಲಿಯೇ ಪ್ರಾರಂಭಿಸಲಾಗುವುದು ಎಂದರು.
ಸಮಾಜದಲ್ಲಿ ಮಹಿಳೆಯರಿಗೆ ಪೂಜ್ಯಸ್ಥಾನ ಗೌರವಗಳಿವೆ. ಆದರೆ ಕಿಡಿಗೇಡಿಗಳು, ದುಷ್ಟಶಕ್ತಿಗಳು ತಾಯಂದಿರನ್ನು ಮಕ್ಕಳನ್ನು ನೋಡುವ ರೀತಿ ಅಮಾನುಷವಾಗಿದೆ. ಈ ಮನಸ್ಥಿತಿಗೆ ಹಲವಾರು ಹೆಣ್ಣುಮಕ್ಕಳು ಬಲಿಯಾಗಿರುವುದನ್ನು ತಡೆಗಟ್ಟಲು ಕಾನೂನುಗಳಾಗಿವೆ, ಕಾರ್ಯಕ್ರಮ ಗಳನ್ನು ರೂಪಿಸಿ, ಹಣಕಾಸಿನ ವೆಚ್ಚವೂ ಆಗಿದೆ. ಆದರೆ, ಮಹಿಳೆಯರಿಗೆ ಆತ್ಮರಕ್ಷಣೆಯ ಕಾರ್ಯಕ್ರಮ ಅಗತ್ಯವಿದೆ. ಆತ್ಮವಿಶ್ವಾಸ ಮತ್ತು ಆತ್ಮರಕ್ಷಣೆಯ ಕಲೆ ಮಹಿಳೆಯರಿಗೆ ಇದ್ದರೆ ದುಷ್ಟ ಶಕ್ತಿಗಳಿಗೆ ಸರಿಯಾದ ಪಾಠವನ್ನು ಕಲಿಸಬಹುದೆಂಬ ವಿಶ್ವಾಸವಿದೆ ಎಂದರು.
ಅದಕ್ಕಾಗಿ ಕಾನೂನು, ಶಿಕ್ಷಣ , ಗೃಹ ಇಲಾಖೆಗಳು,ಸಮಾಜ, ಸರ್ಕಾರ ಮಹಿಳೆಯರ ರಕ್ಷಣೆಗೆ ಒಗ್ಗಟ್ಟಾಗಿ ನಿಂತು ಅವರ ಆತ್ಮರಕ್ಷಣೆ ಮಾತ್ರವಲ್ಲದೆ ಅವರ ಗೌರವದ ರಕ್ಷಣೆಯನ್ನೂ ಮಾಡಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿರುವ ಕರ್ನಾಟಕದಲ್ಲಿ ಮಹಿಳೆಯರ ರಕ್ಷಣೆಗೆ ಪ್ರಾಮುಖ್ಯತೆ ನೀಡಿ , ಕರ್ನಾಟಕ ವಸತಿ ಶಾಲೆಗಳ ಮೂಲಕ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ವರ್ಷವಿಡೀ ಈ ಕಾರ್ಯಕ್ರಮ ನಡೆಸಬೇಕು. ಈ ಎಲ್ಲಾ ಕಾರ್ಯಕ್ರಮಗಳನ್ನು ಕ್ರೂಡೀಕರಿಸಿ ವಿನೂತನ ಯೋಜನೆಯನ್ನು ಜಾರಿಗೆ ತರಲಾಗುವುದು. ಹೆಣ್ಣುಮಕ್ಕಳು ಸ್ವಾಲವಂಬಿಗಳಾದರೆ ದೇಶದ ಭವಿಷ್ಯ ಉತ್ತಮವಾಗಲಿದೆ. ನಮ್ಮ ಸಾಂಸ್ಕೃತಿಕ, ಸಾಮಾಜಿಕ ಲೋಕ ಶ್ರೀಮಂತವಾಗಲಿದೆ ಎಂದರು.
ಆತ್ಮರಕ್ಷಣೆ ಪ್ರತಿಯೊಂದು ಜೀವ ಸಂಕುಲದ ಎಲ್ಲ ಪ್ರಾಣಿಗಳ, ಮಾನವ ಗುಣಧರ್ಮ. ಆತ್ಮರಕ್ಷಣೆಗೆ ಬೇಕಾಗಿರುವುದು ಆತ್ಮವಿಶ್ವಾಸ. ಯಾವ ವ್ಯಕ್ತಿಗೆ ಆತ್ಮವಿಶ್ವಾಸ ಇರುತ್ತದೆಯೋ, ಅವನು ತನ್ನ ಆತ್ಮರಕ್ಷಣೆಯನ್ನು ಅತ್ಯಂತ ಸಮರ್ಥವಾಗಿ ಮಾಡಲು ಸಾಧ್ಯ ಎಂದಿದ್ದಾರೆ.