Politics

ವರ್ಷಕ್ಕೆ 2 ಕೋಟಿ ಉದ್ಯೋಗ ಅಂದವರು, ಈಗ 5 ವರ್ಷಕ್ಕೆ 60 ಲಕ್ಷ ಅಂತಿದ್ದಾರೆ; ಖರ್ಗೆ

ನವದೆಹಲಿ: 2014ರಲ್ಲಿ ಬಿಜೆಪಿ ಪಕ್ಷ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು. ಅದರಂತೆ ಆಗಿದ್ದರೆ ಇದುವರೆಗೆ ಬರೋಬ್ಬರಿ 15 ಕೋಟಿ ಉದ್ಯೋಗ ಸೃಷ್ಟಿ ಮಾಡಬೇಕಿತ್ತು. ಆದರೆ ನೀವೆಷ್ಟು ಉದ್ಯೋಗ ಸೃಷ್ಟಿ ಮಾಡಿದ್ದೀರಿ..? ಹೇಳಿದ ಆಶ್ವಾಸನೆ ಈಡೇರಿಸಿದ್ದೀರಾ..? ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನೆ ಮಾಡಿದ್ದಾರೆ.

ಬಜೆಟ್‌ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ನೀಡಿದ ಆಶ್ವಾಸನೆಯನ್ನು ಈಡೇರಿಸಿಲ್ಲ. ವರ್ಷಕ್ಕೆ ಎರಡು ಕೋಟಿ ಉದ್ಯೋಗ ಕೊಡ್ತೀವಿ ಎಂದವರು ಈಗ ಐದು ವರ್ಷದಲ್ಲಿ ಬರೀ 60 ಲಕ್ಷ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳ್ತಿದ್ದೀರಿ. ಇದು ಉತ್ತಮ ಬಜೆಟ್‌ ಹೇಗೆ ಆಗುತ್ತದೆ ಎಂದು ಪ್ರಶ್ನಿಸಿದರು.

ಕೊರೊನಾದಿಂದಾಗಿ ಉದ್ಯಮಗಳೆಲ್ಲವೂ ಬಾಗಿಲೆಳೆದುಕೊಳ್ಳುತ್ತಿವೆ. ದೊಡ್ಡ ದೊಡ್ಡ ಕಾರ್ಖಾನೆಗಳೇ ಮುಚ್ಚುತ್ತಿವೆ. ಹೂಡಿಕೆದಾರರು ಕೂಡಾ ಬರುತ್ತಿಲ್ಲ. ಇನ್ನು ಸರ್ಕಾರದ ಉದ್ಯೋಗಗಳು ಕೂಡಾ ಕುಸಿಯುತ್ತಿವೆ. ಹೀಗಿರುವಾಗ ವಿದ್ಯಾವಂತ ನಿರುದ್ಯೋಗಿಗಳು ಬದುಕುವುದು ಹೇಗೆ..? ಅವರಿಗೆ ಉದ್ಯೋಗ ಕೊಡವವರು ಯಾರು ಎಂದು ಮಲ್ಲಿಕಾರ್ಜುನ ಖರ್ಗೆ ಇದೇ ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ.

 

 

 

 

Share Post