ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ; ಎಎಸ್ಐಗೆ 20 ವರ್ಷ ಜೈಲು ಶಿಕ್ಷೆ
ತುಮಕೂರು: ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ ಪ್ರಕರಣದಲ್ಲಿ ಸಹಾಯಕ ಪೊಲೀಸ್ ಸಬ್ಇನ್ಸ್ಪೆಕ್ಟರ್ ಉಮೇಶಯ್ಯಗೆ 20 ವರ್ಷ ಜೈಲು ಶಿಕ್ಷೆ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಿ ತುಮಕೂರು ಎರಡನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಶುಕ್ರವಾರ ವಿಚಾರಣೆ ನಡೆಸಿದ್ದ ಕೋರ್ಟ್ ಆರೋಪಿ ಸಾಬೀತಾಗಿದ್ದು, ಸೋಮವಾರ ಶಿಕ್ಷೆ ಪ್ರಕಟಿಸುವುದಾಗಿ ಹೇಳಿತ್ತು. ಇಂದು ಕೋರ್ಟ್ ಅಪರಾಧಿ ಎಎಸ್ಐ ಉಮೇಶಯ್ಯಗೆ 20 ವರ್ಷ ಜೈಲು ಶಿಕ್ಷೆ ನೀಡಿ ಆದೇಶ ಹೊರಡಿಸಿದೆ.
ಅಪರಾಧಿಗೆ ಶಿಕ್ಷೆಯ ಜೊತೆ ಒಂದು ಲಕ್ಷ ರೂಪಾಯಿ ದಂಡ ವಿಧಿಸಲಾಗಿದ್ದು, ಆ ಹಣವನ್ನು ಸಂತ್ರಸ್ತೆಗೆ ನೀಡಬೇಕೆಂದು ಸೂಚನೆ ನೀಡಿದೆ. 2017ರ ಜನವರಿ 15 ರಂದು ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಉಮೇಶಯ್ಯ, ತುಮಕೂರಿನ ಅಂತರಸನಹಳ್ಳಿ ಸೇತುವೆ ಬಳಿ ಹೋಗುತ್ತಿದ್ದ ಬುದ್ಧಿಮಾಂಧ್ಯ ಯುವತಿ ಕಾಣಿಸಿದ್ದಳು. ಆಕೆಯನ್ನು ಜೀಪಿನಲ್ಲಿ ಕೂರಿಸಿಕೊಂಡು ಅತ್ಯಾಚಾರವೆಸಗಿದ್ದರು. ಸಂತ್ರಸ್ತೆಯ ಪೋಷಕರು ಎಎಸ್ಐ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಪ್ರಕರಣದ ವಿಚಾರಣೆ ನಡೆಸಿದ ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಎಚ್.ಎಸ್. ಮಲ್ಲಿಕಾರ್ಜುನ ಸ್ವಾಮಿ, ಎಎಸ್ಐ ಉಮೇಶಯ್ಯ ಅಪರಾಧಿ ಎಂದು ತೀರ್ಪು ನೀಡಿದ್ದು, ೨೦ ವರ್ಷ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ವಿ.ಎ. ಕವಿತಾ ವಾದ ಮಂಡಿಸಿದ್ದರು.