Politics

ಕಾಂಗ್ರೆಸ್‌ಗೂ ನಮಗೂ ಮುಗಿದ ಅಧ್ಯಾಯ; ಸಿ.ಎಂ.ಇಬ್ರಾಹಿಂ

ಬೆಂಗಳೂರು: ವಿಧಾನ ಪರಿಷತ್‌ ಸದಸ್ಯ ಹಾಗೂ ಕಾಂಗ್ರೆಸ್‌ ನಾಯಕ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್‌ ಪಕ್ಷ ಬಿಡುವುದು ಖಚಿತವಾಗಿದೆ. ಹಲವು ದಿನಗಳಿಂದ ಎದ್ದಿದ್ದ ಗುಮಾನಿಗೆ ಸಿ.ಎಂ.ಇಬ್ರಾಹಿಂ ಅವರೇ ಅಧಿಕೃತ ಮುದ್ರೆ ಒತ್ತಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್‌ಗೂ ನಮಗೂ ಮುಗಿದ ಅಧ್ಯಾಯ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟಿದ್ದಾರೆ.

ಜೈಲಿನಲ್ಲಿದ್ದು ಕಟ್ಟಿದ ಜೆಡಿಎಸ್‌ ಪಕ್ಷವನ್ನು ಬಿಟ್ಟಿದ್ದೆ. ಸಿದ್ದರಾಮಯ್ಯ ಅವರಿಗಾಗಿ ದೇವೇಗೌಡರನ್ನು ಬಿಟ್ಟಿದೆ. ಈ ಮೂಲಕ ಸಿದ್ದರಾಮಯ್ಯ ಅವರಿಗೆ ಹೊಸ ರಾಜಕೀಯ ಜೀವನ ಕೊಟ್ಟೆವು. ಆದರೆ ಈಗ ನನಗೆ ಕಾಂಗ್ರೆಸ್‌ನೊಂದಿಗಿನ ನಂಟು ಮುಗಿದಿದೆ. ಇದಕ್ಕೆ ಕಾರಣ ಒಂದೇ ಬಾರಿಗೆ ಹೇಳುವುದಿಲ್ಲ. ಕಂತು ಕಂತಾಗಿ ಎಲ್ಲವನ್ನೂ ಹೇಳುತ್ತೇವೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

ಶೀಘ್ರದಲ್ಲೇ ನನ್ನ ನಿರ್ಧಾರವನ್ನು ಪ್ರಕಟಿಸುತ್ತೇನೆ. ಮುಂದಿನ ರಾಜಕೀಯ ಜೀವನದ ಬಗ್ಗೆಯೂ ತಿಳಿಸುತ್ತೇನೆ ಎಂದು ಪರಿಷತ್‌ ಸದಸ್ಯ ಸಿ.ಎಂ.ಇಬ್ರಾಹಿಂ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿಯಲ್ಲಿ ಸೋಲೋದು ಖಚಿತವಾಗಿತ್ತು.
ಹೀಗಾಗಿ ಬಾದಾಮಿಯಲ್ಲಿ ಎಲ್ಲರನ್ನೂ ಒಪ್ಪಿಸಿ ಅಲ್ಲಿ ನಿಲ್ಲುವಂತೆ ಮಾಡಿದೆ. ಗೆಲ್ಲಿಸಿಕೊಂಡೂ ಬಂದು ಅವರಿಗೆ ಹೊಸ ರಾಜಕೀಯ ಜೀವನ ನೀಡಿದೆವು ಎಂದೂ ಇಬ್ರಾಹಿಂ ಹೇಳಿದ್ದಾರೆ.

ಪರಿಷತ್‌ ಸ್ಥಾನಕ್ಕೆ ಶೀಘ್ರದಲ್ಲೇ ನಾನು ರಾಜೀನಾಮೆ ನೀಡುತ್ತೇನೆ. ದೇವೇಗೌಡರನ್ನು ಕೇಳಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇನೆ. ಡಿ.ಕೆ.ಶಿವಕುಮಾರ್‌ಗೂ ನಮಗೂ ಆಗಿಬರುವುದಿಲ್ಲ. ಹೀಗಾಗಿ ಕಾಂಗ್ರೆಸ್‌ ಬಿಡುತ್ತೇನೆ. ಹೆಚ್‌.ಡಿ.ಕುಮಾರಸ್ವಾಮಿಯವರು ಇಂದು ಬೆಳಗ್ಗೆ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ಕೆಲ ಕಾಂಗ್ರೆಸ್‌ ನಾಯಕರೂ ಕರೆ ಮಾಡಿದ್ದರು. ಆದರೆ ಅವರ ಹೆಸರು ಹೇಳಿದರೆ ಕಷ್ಟವಾಗಬಹುದು ಎಂದು ಇಬ್ರಾಹಿಂ ಹೇಳಿದರು. ದೆಹಲಿ ಕಾಂಗ್ರೆಸ್‌ ಹೈಕಮಾಂಡ್‌ನಿಂದ ಹಲವು ಕರೆಗಳು ಬಂದಿವೆ. ಅವರೊಂದಿಗೆ ಮಾತನಾಡಿದ ವಿವರಗಳನ್ನು ಇಟ್ಟುಕೊಂಡಿದ್ದೇನೆ. ಉತ್ತರ ಪ್ರದೇಶ ಚುನಾವಣೆಯಲ್ಲಿ ಪ್ರಚಾರಕ್ಕೆ ಬರುವಂತೆ ಕರೆಯುತ್ತಿದ್ದಾರೆ. ನಾನು ಅಷ್ಟು ದೊಡ್ಡ ನಾಯಕನಲ್ಲ. ಆದರೂ ಈ ಬಗ್ಗೆ ಯೋಚನೆ ಮಾಡುತ್ತೇನೆ ಎಂದು ಸಿ.ಎಂ.ಇಬ್ರಾಹಿಂ ಹೇಳಿದ್ದಾರೆ.

 

Share Post