Bengaluru

40ವರ್ಷದಲ್ಲಿ ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲ: ಸಿದ್ದರಾಮಯ್ಯ

ಬೆಂಗಳೂರು:  40 ವರ್ಷಗಳಲ್ಲಿ ಬಿಜೆಪಿಯಂತಹ ಭ್ರಷ್ಟ ಸರ್ಕಾರವನ್ನು ನಾನು ನೋಡಿಲ್ಲ ಎಂದು ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ. ಕೇಂದ್ರದಲ್ಲಿ ಬಿಜೆಪಿ ಆಡಳಿತಕ್ಕೆ ಬಂದು ಎಂಟು ವರ್ಷಗಳಾಗಿದೆ. ರೈತರು, ಬಡವರು, ವಿದ್ಯಾರ್ಥಿಗಳು, ಮಹಿಳೆಯರು, ಕೂಲಿ ಕಾರ್ಮಿಕರು ಹೀಗೆ ಯಾವುದಾದರೂ ಒಂದು ವರ್ಗದ ಜನರಿಗೆ ತೃಪ್ತಿ ನೀಡುವಂತ ಆಡಳಿತ ನೀಡಿದೆಯೇ? ಹೋಗಲಿ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಿದೆಯೇ? ಯಾವುದೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನರೇಂದ್ರ ಮೋದಿ ಅವರು ಪ್ರಧಾನಿಯಾದ ವೇಳೆ ಇದ್ದ ದೇಶದ ಒಟ್ಟು ಸಾಲ ರೂ. 53 ಲಕ್ಷ ಕೋಟಿ, ಇವತ್ತು ದೇಶದ ಸಾಲವನ್ನು 135 ಲಕ್ಷ ಕೋಟಿ ರೂಪಾಯಿಗೆ ತಂದಿಟ್ಟಿದ್ದಾರೆ. ರೈತ ವಿರೋಧಿ ಕಾನೂನುಗಳ ವಿರುದ್ಧ ದೇಶದ ರೈತರು ವರ್ಷಕ್ಕೂ ಹೆಚ್ಚು ಕಾಲ ಪ್ರತಿಭಟನೆ ಮಾಡಿ, ಸುಮಾರು 702 ಜನ ರೈತರು ಸಾವನ್ನಪ್ಪಿದರು, ಕಡೆಗೆ ವಿಧಿಯಿಲ್ಲದೆ ಕೇಂದ್ರ ಸರ್ಕಾರ ಕಾನೂನುಗಳನ್ನು ವಾಪಾಸು ಪಡೆಯಿತು. ನರೇಂದ್ರ ಮೋದಿ ಅವರಿಗೆ ಮಾನ ಮರ್ಯಾದೆ ಇದ್ದಿದ್ದರೆ ಈ ವೇಳೆಗೆ ರಾಜೀನಾಮೆ ಕೊಡಬೇಕಿತ್ತು. ಇದು ಬಿಜೆಪಿಗೆ ದೊಡ್ಡ ಸೋಲು, ಆದರೆ ಅದನ್ನೇ ಅವರು ತಮ್ಮ ಜಯ ಎಂದು ತಿಳಿದುಕೊಂಡಿದ್ದಾರೆ.

ರಾಜ್ಯದ ಬಿಜೆಪಿಯಂತ ಭ್ರಷ್ಟ ಸರ್ಕಾರವನ್ನು ನನ್ನ ನಲವತ್ತು ವರ್ಷಗಳ ರಾಜಕೀಯ ಜೀವನದಲ್ಲಿ ಕಂಡಿಲ್ಲ. ಯಾವುದೇ ನೇಮಕಾತಿ, ವರ್ಗಾವಣೆಗಳು ಲಂಚ ಇಲ್ಲದೆ ಆಗಲ್ಲ. ಗುತ್ತಿಗೆ ಕೆಲಸಗಳಲ್ಲಿ 40% ಕಮಿಷನ್ ಕೊಡದೆ ವರ್ಕ್ ಆರ್ಡರ್ ಸಿಗಲ್ಲ. ಇದನ್ನು ಗುತ್ತಿಗೆದಾರರ ಸಂಘದ ಅಧ್ಯಕ್ಷರಾದ ಕೆಂಪಣ್ಣ ಅವರು ಹೇಳಿದ್ದು. ನಾನು ಹದಿಮೂರು ಬಜೆಟ್ ಮಂಡಿಸಿದ್ದೇನೆ. ನಮ್ಮ ಕಾಲದಲ್ಲಿ ಯಾವುದಾದರೂ ಕೆಲಸಕ್ಕೆ ಎನ್.ಒ.ಸಿ ಪಡೆಯಲು ಸಿದ್ದರಾಮಯ್ಯ ಅವರಿಗೆ ಒಂದು ರೂಪಾಯಿ ಲಂಚ ಕೊಟ್ಟಿದ್ದೀನಿ ಎಂದು ಒಬ್ಬ ಕಂಟ್ರಾಕ್ಟರ್ ಹೇಳಿದರೆ ನಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಸವಾಲು ಹಾಕಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಅಲೆ ಆರಂಭವಾಗಿದೆ. ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಎಲ್ಲಾ ನಾಯಕರು ಒಗ್ಗಟ್ಟಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡುತ್ತೇನೆ.

Share Post