ಅವೈಜ್ಞಾನಿಕ ರಸ್ತೆ ಕಾಮಗಾರಿಗೆ ಬಲಿಯಾದ ಯುವಕ: ಸಾವಿನಲ್ಲೂ ಸಾರ್ಥಕತೆ
ತುಮಕೂರು: ಅವೈಜ್ಞಾನಿಕ ರಸ್ತೆ ಕಾಮಗಾರಿಗಳಿಂದ ಬಲಿಯಾದ ಜೀವಗಳೆಷ್ಟೋ ವರ್ಷಕ್ಕೆ ಸಾವಿರಾರು ಸಂಖ್ಯೆಯಲ್ಲಿ ರಸ್ತೆ ಅಪಘಾತಕ್ಕೆ ಒಳಗಾಗಿ ತಮ್ಮ ಪ್ರಾಣವನ್ನು ಕಳೆದುಕೊಂಡಿರುತ್ತಾರೆ. ನಿನ್ನೆಯೂ ಕೂಡ ಇನ್ನು ಬದುಕಿ ಬಾಳಬೇಕಿದ್ದ ಯುವಕ ಅರ್ಧಾಂತರವಾಗಿ ತನ್ನ ಬದುಕನ್ನು ಕಳೆದುಕೊಂಡಿದ್ದಾರೆ. ಕಾರಣ ಈ ಹದಗೆಟ್ಟ ರಸ್ತೆಯಿಂದಾಗಿ.
ಹೌದು, ತಡರಾತ್ರಿ ಹನುಮಂತಪುರದಿಂದ ಬಟವಾಡಿಯತ್ತ ತನ್ನ ಬೈಕಿನಲ್ಲಿ ತೆರಳುತ್ತಿದ್ದ ಯುವಕ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ರಸ್ತೆ ಅಪಘಾತಕ್ಕೀಡಾಗಿ ಉಸಿರು ಚೆಲ್ಲಿದ್ದಾನೆ. ನಗರದ ಅಕ್ಕ-ತಂಗಿ ಪಾರ್ಕ್ ಬಳಿ ದುರಂತ ನಡೆದಿದೆ.
ಹೆದ್ದಾರಿಯಲ್ಲಿ ರಸ್ತೆ ಕಾಮಗಾರಿ ನೆರಯುತ್ತಿದ್ದರಿಂದ ರಸ್ತೆ ಸಂಪೂರ್ಣವಾಗಿ ಹಾಳಾಗಿತ್ತು. ಅದೇ ದಾರಿಯಲ್ಲಿ ತೆರಳಿದ ಯುವಕ ಬೈಕ್ ಸ್ಕಿಡ್ ಆಗಿ ಸಾವನ್ನಪ್ಪಿದ್ದಾನೆ. ಸಾಯುವ ಮುನ್ನ ತನ್ನ ಕಣ್ಣುಗಳನ್ನು ದಾನ ಮಾಡಿರುವ ವಿಚಾರ ತಿಳಿದು ಆತನ ಪೋಷಕರು ಬೆಂಗಳೂರಿನ ಲಯನ್ಸ್ ಇಂಟರ್ನ್ಯಾಷನಲ್ ಐ ಬ್ಯಾಂಕ್ ಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಯುವಕ ದಾನ ಮಾಡಿದ ಕಣ್ಣುಗಳಿಂದ ನಾಲ್ವರಿಗೆ ದೃಷ್ಟಿ ಸಿಕ್ಕಿದೆ ಎಂದು ವೈದ್ಯರು ತಿಳಿಸಿದ್ದಾರೆ. ಮಗನನ್ನು ಉಳಿಸಿಕೊಳ್ಳದಿದ್ದರೂ ಆತ ಮಾಡಿದ ಕೆಲಸ ನಮಗೆ ಸ್ವಲ್ಪ ನೆಮ್ಮದಿ ತಂದಿದೆ. ಆ ಕಣ್ಣುಗಳನ್ನು ನೋಡಿದಾಗ ನಮ್ಮ ಮಗ ಬದುಕಿದ್ದಾನೆ ಎಂಬ ಭರವಸೆ ನಮ್ಮಲಲಿ ಮೂಡುತ್ತದೆ ಎಂದು ಪೋಷಕರು ಭಾವುಕರಾಗಿದ್ದಾರೆ.
ಇನ್ನೂ ಗುಂಡಿ ಬಿದ್ದ ರಸ್ತೆಯನ್ನು ಬೇಗ ಸರಿಪಡಿಸಿ, ನಮ್ಮ ಮಗನಿಗೆ ಆದ ರೀತಿ ಮತ್ಯಾರಿಗೂ ಆಗುವುದು ಬೇಡ ಎಂದು ಅಳಲು ತೋಡಿಕೊಂಡಿದ್ದಾರೆ. ಇನ್ನಾದರೂ ತುಮಕೂರು ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ರಸ್ತೆ ಸರಿಪಡಿಸುವ ಕೆಲಸ ಮಾಡಲಿ ಎಂದು ಒತ್ತಾಯ ಮಾಡಿದ್ದಾರೆ.