HistorySports

ಕ್ರಿಕೆಟ್‌ನಲ್ಲಿ ಹೆಲಿಕಾಪ್ಟರ್‌ ಶಾಟ್‌ ಹುಟ್ಟಿದ್ದು ಹೇಗೆ..?; ಧೋನಿಗೆ ಅದನ್ನು ಕಲಿಸಿದ್ದು ಯಾರು..?

ಹೆಲಿಕಾಪ್ಟರ್‌ ಶಾಟ್‌.. ಇದರ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಪರಿಚಯ ಮಾಡಿಕೊಡುವ ಅಗತ್ಯವೇ ಇಲ್ಲ.. ಈ ಧೋನಿ ಸಿಗ್ನೇಚರ್‌ ಶಾಟ್‌ ಬಗ್ಗೆ ಎಲ್ಲರಿಗೂ ಗೊತ್ತೇ ಇದೆ. ಬ್ಯಾಟ್ಸ್‌ಮನ್‌ ಬೂಟುಗಳನ್ನು ಗುರಿಯಾಗಿಸಿಕೊಂಡು ಬೌಲರ್‌ಗಳು ಎಸೆಯುವ ಯಾರ್ಕರ್‌ಗಳಿಗೆ ಉತ್ತರ ನೀಡಲು ಬ್ಯಾಟ್ಸ್‌ಮನ್‌ಗಳು ಪರದಾಡುತ್ತಾರೆ. ಈ ಶರವೇಗದಲ್ಲಿ ನುಗ್ಗಿಬರುವ ಈ ಯಾರ್ಕರ್‌ಗಳನ್ನು ಎದುರಿಸಲಾರದೆ ಬ್ಯಾಟ್ಸ್‌ಮನ್‌ ವಿಕೆಟ್‌ ಒಪ್ಪಿಸುತ್ತಾರೆ. ಆದರೆ ಯಾರ್ಕರ್‌ಗಳನ್ನು ಕೂಡಾ ಹೆಲಿಕಾಪ್ಟರ್‌ ಶಾಟ್‌ ಮೂಲಕ ಪೆವಿಲಿಯನ್‌ಗೆ ಕಳುಹಿಸಬಹುದು ಎಂದು ತೋರಿಸಿಕೊಟ್ಟವರು ಕ್ಯಾಪ್ಟನ್‌ ಕೂಲ್‌ ಎಂದೇ ಹೆಸರಾಗಿರುವ ಮಹೇಂದ್ರ ಸಿಂಗ್‌ ಧೋನಿ. ಇದು ಧೋನಿಗೆ ಒಲಿದು ಬಂದ ಅಪರೂಪದ ಟೆಕ್ನಿಕ್‌.. ಇದಕ್ಕೆ ಟ್ರೈನಿಂಗ್‌ ಹಾಗೂ ಪ್ರಾಕ್ಟೀಸ್‌ ಅತ್ಯಂತ ಅವಶ್ಯಕ..
೨೦೦೬ರಲ್ಲಿ ಮೊದಲ ಹೆಲಿಕಾಪ್ಟರ್‌ ಶಾಟ್‌..!
೨೦೦೬ರಲ್ಲಿ ಗೋವಾದಲ್ಲಿ ಇಂಗ್ಲೆಂಡ್‌ ವಿರುದ್ಧ ನಡೆಯುತ್ತಿದ್ದ ಏಕದಿನ ಪಂದ್ಯದಲ್ಲಿ ಜೇಮ್ಸ್‌ ಅಂಡರ್‌ಸನ್‌ ಎಸೆದ ಫುಲ್‌ ಲೆಂತ್‌ ಬಾಲ್‌ನ್ನು ಧೋನಿ ತನ್ನದೇ ಸ್ಟೈಲ್‌ನಲ್ಲಿ ಪೆವಿಲಿಯನ್‌ಗೆ ಕಳುಹಿಸುತ್ತಾರೆ. ಧೋನಿ ಆ ಹೊಡೆತ ಬಂಗಿ ನೋಡಿಗರಿಗೆ ವಿಶೇಷವಾಗಿ ಕಾಣುತ್ತದೆ. ಕ್ರಿಕೆಟ್‌ ರಸಿಕರನ್ನು ಆಕರ್ಷಿಸುತ್ತದೆ. ಆದರೆ ಆಗ ಆ ಹೊಡೆತವನ್ನು ಯಾರೂ ಹೆಲಿಕಾಪ್ಟರ್‌ ಶಾಟ್‌ ಎಂದು ಕರೆದಿರಲಿಲ್ಲ.
ಆದರೆ, ಒಂದು ಕೂಲ್‌ ಡ್ರಿಂಕ್‌ ಕಂಪನಿ ತನ್ನ ಜಾಹೀರಾತಿನಲ್ಲಿ ಧೋನಿ ಹೊಡೆದ ಈ ಹೊಡೆತವನ್ನು ಹೆಲಿಕಾಪ್ಟರ್‌ ಶಾಟ್‌ ಎಂಧು ಕರೆಯುತ್ತದೆ. ಅಂದಿನಿಂದ ಧೋನಿ ಹೊಡೆಯುವ ಈ ವಿಶೇಷ ಹೊಡೆತವನ್ನು ಹೆಲಿಕಾಪ್ಟರ್‌ ಶಾಟ್‌ ಎಂದು ಕರೆಯಲಾಗುತ್ತಿದೆ. ಧೋನಿ ಬಯೋಪಿಕ್‌ ʻಧೋನಿ; ದ ಅನ್‌ಟೋಲ್ಡ್‌ ಸ್ಟೋರಿʼ ಸಿನಿಮಾದಲ್ಲಿ ಹೆಲಿಕಾಪ್ಟರ್‌ ಶಾಟ್‌ ಬಗ್ಗೆ ಪ್ರಸ್ತಾಪವಿದೆ.
ಈ ಹೆಲಿಕಾಪ್ಟರ್‌ ಶಾಟ್‌ ಕಂಡುಹಿಡಿದವರು ಧೋನಿ ಅಲ್ಲವೇ ಅಲ್ಲ..!
ವೇಗವಾಗಿ ನುಗ್ಗಿಬರುವ ಯಾರ್ಕರ್‌ ಅನ್ನು ಕಂಟ್ರೋಲ್‌ ಮಾಡುವುದೇ ಬ್ಯಾಟ್ಸ್‌ಮನ್‌ಗಳಿಗೆ ಕಷ್ಟದ ಕೆಲಸ. ಎಲ್‌ಬಿ ಆಗದಂತೆ, ಅಥವಾ ವಿಕೆಟ್‌ಗೆ ಬಡಿದಂತೆ ಬಾಲ್‌ನ್ನು ತಡೆಯುವುದೇ ಬ್ಯಾಟ್ಸ್‌ಮನ್‌ಗಳಿಗೆ ಸಾಹಸದ ಕೆಲಸ. ಅಂತಹ ಯಾರ್ಕರ್‌ನ್ನು ಫ್ಲಿಕ್‌ ಮಾಡಿ ಲೆಗ್‌ಸೈಡ್‌ನಿಂದ ಅತಿ ಎತ್ತರದಲ್ಲಿ ಸಿಕ್ಸರ್‌ ಹೊಡೆಯುವುದು ಒಂದು ರೀತಿಯಲ್ಲಿ ವಿಶೇಷವಾದ ಟೆಕ್ನಿಕ್‌. ಈ ವಿಧಾನವನ್ನು ಧೋನಿ ಬಹಳ ಅಚ್ಚುಕಟ್ಟಾಗಿ ಬಳಸಿಕೊಂಡು ಪ್ರಪಂಚದಾದ್ಯಂತ ಹೆಸರಾದರು. ಆದರೆ ಈ ಹೆಲಿಕಾಪ್ಟರ್‌ ಶಾಟ್‌ ಕಂಡುಹಿಡಿದಿದ್ದು ಧೋನಿ ಅಲ್ಲವೇ ಅಲ್ಲ. ಇದನ್ನು ಕಂಡುಹಿಡಿದಿದ್ದು ಸಂತೋಷ್‌ ಲಾಲ್‌ ಎಂಬ ಕ್ರಿಕೆಟರ್‌.
ಯಾರು ಈ ಸಂತೋಷ್‌ ಲಾಲ್‌..?
ಸಂತೋಷ್‌ ಲಾಲ್‌ ಕೂಡಾ ಒಬ್ಬ ಕ್ರಿಕೆಟರ್‌. ಮಹೇಂದ್ರ ಸಿಂಗ್‌ ಧೋನಿಗೆ ಆಪ್ತರಲ್ಲಿ ಒಬ್ಬರು. ಸಂತೋಷ್‌ ಲಾಲ್‌ ಜೊತೆ ಧೋನಿ ರಣಜಿ ಪಂದ್ಯಗಳನ್ನು ಆಡುತ್ತಿದ್ದರು. ಧೋನಿ ಈತನ ಬಳಿಯಿಂದಲೇ ಹೆಲಿಕಾಪ್ಟರ್‌ ಶಾಟ್‌ ಕಲಿತುಕೊಳ್ಳುತ್ತಾರೆ. ಜಾರ್ಖಂಡ್‌, ಬಿಹಾರ್‌ ಪರವಾಗಿ ೮ ಪ್ರಥಮ ದರ್ಜೆ ಪಂದ್ಯಗಳಲ್ಲಿ ಆಡಿದ್ದ ಸಂತೋಷ್‌ ಲಾಲ್‌, ಧೋನಿ ಜೊತೆ ಬ್ಯಾಟಿಂಗ್‌ ಪ್ರಾಕ್ಟೀಸ್‌ ಮಾಡುತ್ತಿದ್ದರು.
ಏಳು ರಣಜಿಯಲ್ಲಿ ಬ್ಯಾಟ್ಸ್‌ಮನ್‌ ಆಗಿದ್ದ ಸಂತೋಷ್‌ ಲಾಲ್‌ ೨೦೧೩ರಲ್ಲಿ ಸಾವನ್ನಪ್ಪುತ್ತಾರೆ. ಅನಾರೋಗ್ಯದಿಂದ ಕೊನೆಯ ದಿನಗಳನ್ನು ಎಣಿಸುತ್ತಿದ್ದ ಸಂತೋಷ್‌ ಲಾಲ್‌ಗೆ ಧೋನಿ ಎಲ್ಲಾ ರೀತಿಯ ಸಹಾಯಗಳನ್ನೂ ನೀಡಿದ್ದರಂತೆ. ಉತ್ತಮ ಚಿಕಿತ್ಸೆ ಕೊಡಿಸುವುದಕ್ಕಾಗಿ ರಾಂಚಿಯಿಂದ ದೆಹಲಿಗೆ ಕರೆತರಲು ಏರ್‌ ಆಂಬುಲೆನ್ಸ್‌ ವ್ಯವಸ್ಥೆಯನ್ನೂ ಧೋನಿ ಮಾಡಿದ್ದರು. ಆದರೆ ದುರದೃಷ್ಟವಶಾತ್‌ ಸಂತೋಷ್‌ ಲಾಲ್‌ ಚಿಕಿತ್ಸೆ ಫಲಕಾರಿಯಾದೆ ತೀರಿಕೊಳ್ಳುತ್ತಾರೆ.
ಹೆಲಿಕಾಪ್ಟರ್‌ ಶಾಟ್‌ ಹೊಡೆಯಲು ಹಲವರ ಪ್ರಯತ್ನ..!
ಹೆಲಿಕಾಪ್ಟರ್‌ ಶಾಟ್‌ ಹೊಡೆಯುವುದು ಧೋನಿಗೆ ಲೀಲಾಜಾಲ. ಈ ಶಾಟ್‌ ವರ್ಲ್ಡ್‌ ಫೇಮಸ್‌ ಕೂಡಾ. ಈ ಶಾಟ್‌ ಹೊಡೆಯಲು ಎಷ್ಟೋ ಕ್ರಿಕೆಟರ್‌ಗಳು ಪ್ರಯತ್ನಿಸಿ ವಿಫಲರಾಗಿದ್ದಾರೆ. ಆದರೆ ಟೀಂ ಇಂಡಿಯಾ ಆಲ್‌ರೌಂಡರ್‌ ಹಾರ್ಧಿಕ್‌ ಪಾಂಡ್ಯ, ಧೋನಿ ಸ್ಟೈಲ್‌ನಲ್ಲಿ ಒಮ್ಮೊಮ್ಮೆ ಹೆಲಿಕಾಪ್ಟರ್‌ ಶಾಟ್‌ ಹೊಡೆಯುತ್ತಿದ್ದಾರೆ. ಇದರ ಜೊತೆಗೆ ಅಫ್ಘಾನಿಸ್ತಾನದ ಆಟಗಾರ ಮಹ್ಮದ್‌ ಷಹಜಾದ್‌ ಕೂಡಾ ತನ್ನದೇ ಸ್ಟೈಲ್‌ನಲ್ಲಿ ಈ ಹೆಲಿಕಾಪ್ಟರ್‌ ಶಾಟ್‌ ಹೊಡೆಯುತ್ತಾರೆ.

Share Post