BengaluruPolitics

ಸಿಎಂ ಪ್ರಚಾರದ ವೇಳೆ ಭದ್ರತಾಲೋಪವಾಗಿಲ್ಲ; ಪೊಲೀಸ್ ಇಲಾಖೆ ಸ್ಪಷ್ಟನೆ

ಬೆಂಗಳೂರು; ಬೆಂಗಳೂರು‌ ದಕ್ಷಿಣ ಕ್ಷೇತ್ರದಲ್ಲಿ ಸೌಮ್ಯಾರೆಡ್ಡಿ ಪರ ಸಿಎಂ ಸಿದ್ದರಾಮಯ್ಯ ಪ್ರಚಾರ ಮಾಡುವ ವೇಳೆ ರಿಯಾಜ್ ಎಂಬುವವರು ರಿವಾಲ್ವಾರ್ ಇಟ್ಟುಕೊಂಡು ಬಂದಿದ್ದು, ಭದ್ರತಾಲೋಪವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಆದ್ರೆ, ರಿಯಾಜ್ ಪರವಾನಗಿ ರಿವಾಲ್ವಾರ್ ಹೊಂದಿದ್ದು, ಚುನಾವಣೆ ಸಮಯದಲ್ಲೂ ಅವರು ರಿವಾಲ್ವಾರ್ ಇಟ್ಟುಕೊಳ್ಳಲು ಪೊಲೀಸ್ ಇಲಾಖೆ ವಿನಾಯಿತಿ ನೀಡಿದೆ. ಹೀಗಾಗಿ, ಯಾವುದೇ ಭದ್ರತಾಲೋಪವಾಗಿಲ್ಲ ಅನ್ನೋದು ಸ್ಪಷ್ಟವಾಗಿದೆ.

  ಘಟನೆಯ ನಂತರ ಪೊಲೀಸ್ ಇಲಾಖೆ ಒಂದು ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ 277 ಹೆಸರುಗಳನ್ನು ಸೂಚಿಸಲಾಗಿದ್ದು, ಇವರಿಗೆ ಚುನಾವಣೆ ಸಮಯದಲ್ಲೂ ರಿವಾಲ್ವಾರ್ ಇಟ್ಟುಕೊಳ್ಳಲು ಅನುಮತಿ ನೀಡಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳಿದೆ. ಚುನಾವಣೆ ಸಮಯದಲ್ಲಿ ಪರವಾನಗಿ ಹೊಂದಿದ್ದರೂ ಗನ್, ಪಿಸ್ತೂಲ್, ರಿವಾಲ್ವಾರ್ ಗಳನ್ನು  ಪೊಲೀಸರಿಗೆ ಒಪ್ಪಿಸಬೇಕು. ಆದ್ರೆ ಕೆಲವರಿಗೆ ಜೀವಭಯವಿರುವುದರಿಂದ ಕೆಲ ಷರತ್ತುಗಳೊಂದಿಗೆ ರಿವಾಲ್ವಾರ್ ಇಟ್ಟುಕೊಳ್ಳಲು‌ ವಿನಾಯಿತಿ ನೀಡಲಾಗಿದೆ. ಅದರಲ್ಲಿ ರಿಯಾಜ್ ಕೂಡಾ ಇದ್ದಾರೆ ಎಂದು ಸ್ಪಷ್ಟಪಡಿಸಲಾಗಿದೆ.

 ಚಿಕ್ಕಪೇಟೆ ವಿಧಾನಸಭಾ ವ್ಯಾಪ್ತಿಯಲ್ಲಿ ಸಿಎಂ ಸಿದ್ದರಾಮಯ್ಯ  ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಭಾರೀ ಭದ್ರತಾ ಲೋಪ ಉಂಟಾಗಿದೆ‌‌ ಎಂಬ ಆರೋಪ ಕೇಳಿಬಂದಿತ್ತು. ಸಿಎಂ  ಸಿದ್ದರಾಮಯ್ಯ ಅವರು ತೆರೆದ ವಾಹನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದರು. ಅವರ ಜೊತೆಗೆ ಸಚಿವ ರಾಮಲಿಂಗಾ ರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ, ಮಾಜಿ ಶಾಸಕ ಆರ್ ವಿ ದೇವರಾಜ್ ಇದ್ದರು. ಈ ವೇಳೆ ವಾಹನದ ಮೇಲೆ ಎದುರಿನಿಂದ ಹತ್ತಿದ ರಿಯಾಜ್  ನಾಯಕರಿಗೆ ಹೂಮಾಲೆ ಹಾಕಿದ್ದರು. ಈ ವೇಳೆ  ಸೊಂಟದಲ್ಲಿ ರಿವಾಲ್ವರ್ ಇತ್ತು.

 

Share Post