Politics

ಹಲವು ಕ್ಷೇತ್ರಗಳಿಂದ ಆಹ್ವಾನವಿದೆ; ಹೈಕಮಾಂಡ್‌ ಹೇಳಿದ ಕಡೆ ಸ್ಪರ್ಧೆ ಎಂದ ಸಿದ್ದರಾಮಯ್ಯ

ಬೆಂಗಳೂರು: 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಎಲ್ಲಿ ಹೇಳುತ್ತದೆಯೋ ಅಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಚಾಮರಾಜಪೇಟೆಯ ಮಹದೇಶ್ವರ ಸಭಾಭವನದ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ನಾನು ಆಗಾಗ ಚಾಮರಾಜಪೇಟೆ ಕ್ಷೇತ್ರಕ್ಕೆ ಬರುತ್ತಿರುತ್ತೇನೆ. ಈ ಕಾರಣದಿಂದಾಗಿ ಇಲ್ಲೇ ಸ್ಪರ್ಧಿಸುತ್ತೇನೆ ಎಂದು ಕೆಲವರು ಭಾವಿಸಿದ್ದಾರೆ. ಹಲವರ ಆಹ್ವಾನಿಸಿದ್ದಾರೆ ಕೂಡಾ. ಆದ್ರೆ ಚಾಮರಾಜಪೇಟೆ ಕ್ಷೇತ್ರದ ಬಗ್ಗೆ ನನಗೆ ಒಲವೂ ಇಲ್ಲ, ವಿರೋಧವೂ ಇಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.


ನನಗೆ ಹಲವು ಕ್ಷೇತ್ರಗಳಿಂದ ಆಹ್ವಾನ ಬರುತ್ತಿದೆ. ಆದರೆ ಸದ್ಯ ನಾನು ಬದಾಮಿ ಕ್ಷೇತ್ರದ ಶಾಸಕನಾಗಿದ್ದೇನೆ. ಮುಂದೆ ಹೈಕಮಾಂಡ್‌ ಯಾವ ಕ್ಷೇತ್ರದಲ್ಲಿ ನಿಲ್ಲಿ ಎಂದು ಹೇಳುತ್ತದೋ ಅದನ್ನು ಮಾಡುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದರು. ಕೋಲಾರ, ಕೊಪ್ಪಳ, ಚಾಮರಾಜಪೇಟೆ, ಚಿಕ್ಕನಾಯಕನಹಳ್ಳಿ, ಅರಕಲಗೂಡು ಹಾಗೂ ಹುಣಸೂರು ಕ್ಷೇತ್ರಗಳಿಂದ ನನಗೆ ಆಹ್ವಾನವಿದೆ. ಆದರೆ ಎಲ್ಲಾ ಕ್ಷೇತ್ರಗಳಲ್ಲೂ ನಿಲ್ಲೋದಕ್ಕೆ ಆಗುವುದಿಲ್ಲ. ಆ ಕ್ಷೇತ್ರಗಳ ಮತದಾರರು ಪ್ರೀತಿಯಿಂದ ನನ್ನನ್ನು ಕರೆಯುತ್ತಾರೆ. ಆದರೆ ನನ್ನ ಸ್ಪರ್ಧೆಯನ್ನು ನಿರ್ಧಸೋದು ಕಾಂಗ್ರೆಸ್‌ ಹೈಕಮಾಂಡ್‌ ಎಂದು ಅವರು ಹೇಳಿದರು.
ಇನ್ನು ಇತ್ತೀಚೆಗೆ ಬದಾಮಿಯಲ್ಲಿ ನಡೆದ ಸಮಾರಂಭದಲ್ಲಿ ಸಿದ್ದರಾಮಯ್ಯ ಎದುರೇ ಬಿ.ಬಿ.ಚಿಮ್ಮನಕಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದರು. ನಿಮಗೆ ಬೇರೆ ಕ್ಷೇತ್ರ ಇಲ್ಲವಾ ಎಂದು ಪ್ರಶ್ನೆ ಮಾಡಿದ್ದರು. ಈ ಬಗ್ಗೆ ಉತ್ತರಿಸಿದ ಸಿದ್ದರಾಮಯ್ಯ, ಚಿಮ್ಮನಕಟ್ಟಿ ಪರಿಷತ್‌ ಟಿಕೆಟ್‌ ಕೇಳಿದ್ದರು. ಆದರೆ ಕೇಳಿದವರಿಗೆಲ್ಲಾ ಟಿಕೆಟ್‌ ಕೊಡೋದಕ್ಕೆ ಆಗುವುದಿಲ್ಲ. ಅಷ್ಟಕ್ಕೂ ಟಿಕೆಟ್‌ ಹಂಚಿಕೆ ಮಾಡುವುದು ನಾನು ಅಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Share Post