BengaluruPolitics

ಎರಡನೇ ಬಾರಿ ಸಿಎಂ ಆಗ್ತಾರಾ ಸಿದ್ದರಾಮಯ್ಯ; ಯಾರು ಈ ಸಿದ್ದರಾಮಯ್ಯ..?

ಬೆಂಗಳೂರು; ಮೈಸೂರಿನ ಸಿದ್ದರಾಮನಹುಂಡಿಯಲ್ಲಿ ಸಾಮಾನ್ಯ ಕುರುಬ ಕುಟುಂಬದಲ್ಲಿ ಜನಿಸಿದ ಸಿದ್ದರಾಮಯ್ಯ ಎರಡನೇ ಬಾರಿ ಸಿಎಂ ಆಗುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲಿ ಶಾಲೆಗೆ ಹೋಗದೇ ಕುರಿ ಮೇಯಿಸುತ್ತಿದ್ದ ಸಿದ್ದರಾಮಯ್ಯ, ನೇರವಾಗಿ ಆರಣೇ ತರಗತಿಗೆ ದಾಖಲಾಗುತ್ತಾರೆ. ಊರಿನ ಶಿಕ್ಷಕರೊಬ್ಬರು ಸಿದ್ದರಾಮಯ್ಯರನ್ನು ಶಾಲೆಗೆ ಸೇರುವಂತೆ ಮಾಡಿದ್ದರಿಂದ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. 2013ರಲ್ಲಿ ಮೊದಲ ಬಾರಿ ಸಿಎಂ ಆಗಿ ಐದು ವರ್ಷ ಸಮರ್ಥವಾಗಿ ಆಡಳಿತ ನಡೆಸಿದ್ದ ಸಿದ್ದರಾಮಯ್ಯಗೆ ಈಗ ಮತ್ತೆ ಸಿಎಂ ಆಗುವ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸಮಾಜವಾದಿಯಾಗಿ ರಾಜಕೀಯ ಪಯಣ ಆರಂಭಿಸಿದ ಸಿದ್ದರಾಮಯ್ಯ ತಮ್ಮ ರಾಜಕೀಯ ಜೀವನದಲ್ಲಿ ಹಲವು ತಿರುವುಗಳನ್ನು ಪಡೆದಿದ್ದಾರೆ. ಅವರು ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿಸ್ಪರ್ಧಿಯಾಗಿದ್ದರು. ಜನತಾ ಪರಿವಾರದಲ್ಲಿ ದೊಡ್ಡ ನಾಯಕರಾಗಿದ್ದವು. ಆದರೆ, ಜೆಡಿಎಸ್‌ನಿಂದ ಉಚ್ಛಾಟನೆ ಮಾಡಿದ್ದರಿಂದಾಗಿ ಅವರು ಕಾಂಗ್ರೆಸ್‌ ಸೇರಿ, ಅಹಿಂದ ವರ್ಗಗಳ ದೊಡ್ಡ ನಾಯಕರಾಗಿ ಸಿಎಂ ಆಗುವ ಅವಕಾಶ ಪಡೆದುಕೊಂಡರು. 75 ವರ್ಷದ ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಿ 45 ವರ್ಷಗಳ ಅನುಭವವಿದೆ. ಅವರು ಪೂರ್ಣ ಐದು ವರ್ಷಗಳ ಕಾಲ ಕರ್ನಾಟಕದ ಮುಖ್ಯಮಂತ್ರಿ ಹುದ್ದೆಯನ್ನು ಅಲಂಕರಿಸಿದ ಎರಡನೇ ವ್ಯಕ್ತಿ. ಈ ಹಿಂದೆ ದೇವರಾಜ್ ಅರಸ್ ಮಾತ್ರ ಐದು ವರ್ಷ ಪೂರೈಸಿದ್ದರು.

ಸಿದ್ದರಾಮಯ್ಯ ಅವರು ಮೈಸೂರು ಜಿಲ್ಲೆಯ ಸಿದ್ದರಾಮನಹುಂಡಿಯಲ್ಲಿ 1948 ಆಗಸ್ಟ್ 12 ರಂದು ಜನಿಸಿದರು. ಅವರದು ಕೃಷಿ ಕುಟುಂಬ. ಹತ್ತು ವರ್ಷದ ತನಕ ಶಾಲೆಗೆ ಹೋಗಿರಲಿಲ್ಲ. ಕೃಷಿ ಕೆಲಸದಲ್ಲಿ ಸಹಾಯ ಮಾಡುವುದು ಮತ್ತು ಜಾನುವಾರುಗಳನ್ನು, ಕುರಿಗಳನ್ನು ಸಾಕುವುದು ಮಾಡುತ್ತಿದ್ದ ಸಿದ್ದರಾಮಯ್ಯ, ಊರಿನ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರ ಕಣ್ಣಿಗೆ ಬಿದ್ದರು. ಆ ಶಿಕ್ಷಕನ ಬಲವಂತದಿಂದ ಶಾಲೆ ಸೇರಿದ ಅವರು ಮುಂದೆ ಪದವಿ ಮುಗಿಸಿ ಮೈಸೂರು ವಿಶ್ವವಿದ್ಯಾನಿಲಯದಿಂದ ಕಾನೂನು ಪದವಿ ಪಡೆದರು.

ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಸೇರಿದ ಕುರಬ ಸಮುದಾಯದವರು.  ಕರ್ನಾಟಕದಲ್ಲಿ, ಕುರಬರು  ಶೇಕಡಾ 9 ರಷ್ಟಿದ್ದಾರೆ.  ಸಿದ್ದರಾಮಯ್ಯ ಸಮಾಜವಾದಿ ಸಿದ್ಧಾಂತದೊಂದಿಗೆ ಬೆಳೆದವರು. ರಾಮ್ ಮನೋಹರ್ ಲೋಹಿಯಾ ಅವರ ಪ್ರಭಾವ ಅವರ ಮೇಲೆ ಇತ್ತು ಎನ್ನಲಾಗಿದೆ. 1978ರಲ್ಲಿ ಮೈಸೂರು ಜಿಲ್ಲಾ ನ್ಯಾಯಾಲಯದಲ್ಲಿ ರೈತ ನಾಯಕ ನಂಜುಂಡಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ನಂಜುಂಡಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ರಾಜಕೀಯಕ್ಕೆ ಕರೆತಂದರು.

1983ರಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಮೊದಲ ಬಾರಿಗೆ ಶಾಸಕರಾಗಿ ಗೆದ್ದರು. ಆ ಗೆಲುವಿನೊಂದಿಗೆ ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯ ಅವರಿಗೆ ಮನ್ನಣೆ ಸಿಕ್ಕಂತಾಯಿತು.  ನಂತರ ಅವರು ಜನತಾ ಪಕ್ಷಕ್ಕೆ ಸೇರಿದರು. ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಇರಿಸಲು ರಚಿಸಲಾದ ಕನ್ನಡ ಕಾವಲು ಸಮಿತಿಗೆ ಅವರನ್ನು ಅಧ್ಯಕ್ಷರನ್ನಾಗಿ ಮಾಡಲಾಯಿತು. 1985ರ ಉಪಚುನಾವಣೆಯಲ್ಲಿ ಜನತಾ ಪಕ್ಷ 139 ಸ್ಥಾನಗಳನ್ನು ಗೆಲ್ಲುವ ಮೂಲಕ ಅಧಿಕಾರಕ್ಕೆ ಬಂದಿತ್ತು. ಚಾಮುಂಡೇಶ್ವರಿ ಕ್ಷೇತ್ರದಿಂದ ಮತ್ತೊಮ್ಮೆ ಗೆದ್ದ ಸಿದ್ದರಾಮಯ್ಯ ರಾಮಕೃಷ್ಣ ಹೆಗಡೆ ಸರ್ಕಾರದಲ್ಲಿ ಪಶು ಸಂಗೋಪನಾ ಸಚಿವರಾಗಿ ಅಧಿಕಾರ ವಹಿಸಿಕೊಂಡರು.

1994ರಲ್ಲಿ ಎಚ್‌ಡಿ ದೇವೇಗೌಡರ ನೇತೃತ್ವದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಿತ್ತು. ಆಗ ಸಿದ್ದರಾಮಯ್ಯ ಅವರು ಹಣಕಾಸು ಸಚಿವರಾಗಿ ಕೆಲಸ ಮಾಡಿದರು. 1996ರಲ್ಲಿ ಜೆ.ಎಚ್‌. ಪಟೇಲ್ ಮುಖ್ಯಮಂತ್ರಿಯಾದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ನೇಮಕಗೊಂಡರು.

ದೇವೇಗೌಡರ ನೇತೃತ್ವದ ಗುಂಪು ಜನತಾ ಪಕ್ಷದಿಂದ ಬೇರ್ಪಟ್ಟು ಜನತಾ ದಳ (ಜಾತ್ಯತೀತ) ಎಂಬ ಪಕ್ಷವನ್ನು ಸ್ಥಾಪಿಸಿತು. ಸಿದ್ದರಾಮಯ್ಯ ಕೂಡ ದೇವೇಗೌಡರ ಬಣದೊಂದಿಗೆ ಹೊರಟರು. 2004ರಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರ ರಚಿಸಿದಾಗ ಸಿದ್ದರಾಮಯ್ಯ ಉಪಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು.  ಕೆಲ ಸಮಯದಲ್ಲಿ ಜೆಡಿಎಸ್ ಪಕ್ಷದಲ್ಲಿ ದೇವೇಗೌಡ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯ ಉಂಟಾಯಿತು. ಸಿದ್ದರಾಮಯ್ಯ ಜೆಡಿಎಸ್‌ನಲ್ಲಿ ನಂ-2 ನಾಯಕರಾಗಿದ್ದರು. ಮಗ ಕುಮಾರಸ್ವಾಮಿಗಾಗಿ ಸಿದ್ದರಾಮಯ್ಯ ಅವರನ್ನು ದೇವೇಗೌಡರು ಪಕ್ಕಕ್ಕಿಟ್ಟರು ಎಂಬ ಟೀಕೆ ಇದೆ.

2005ರಲ್ಲಿ ಭಿನ್ನಾಭಿಪ್ರಾಯದಿಂದ ಸಿದ್ದರಾಮಯ್ಯ ಅವರನ್ನು ಜೆಡಿಎಸ್‌ನಿಂದ ಹೊರಹಾಕಲಾಯಿತು. ಹಾಗಾಗಿ ಅವರು ಕಾಂಗ್ರೆಸ್ ಸೇರಿದರು. 2006ರ ಉಪಚುನಾವಣೆಯಲ್ಲಿ ಸಿದ್ದರಾಮಯ್ಯ  ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದು ಬಂದರು.  2013ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲುವಿನತ್ತ ಮುನ್ನಡೆಸಿದ್ದ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು.

ಹಿಂದಿನಿಂದಲೂ ಸಿದ್ದರಾಮಯ್ಯನವರು ನಾಸ್ತಿಕರು, ದೇವಸ್ಥಾನಗಳಿಗೆ ಹೋಗುವುದಿಲ್ಲ ಎಂಬ ಮುದ್ರೆ ಹೊಂದಿದ್ದರು. ಅದಕ್ಕೆ ಅವರ ದಿನನಿತ್ಯದ ಉಡುಗೆಯೂ ಸೂಕ್ತವಾಗಿದೆ. ಆದರೆ ಸಿದ್ದರಾಮಯ್ಯ ಅವರು ನಾಸ್ತಿಕರಲ್ಲ, ಅವರಿಗೆ ದೈವಿಕ ಚಿಂತನೆಗಳಿವೆ ಎಂದು ಹಿಂದೆಯೇ ಹೇಳಿದ್ದರು. ನಾನು ನಾಸ್ತಿಕ ಎಂದು ಎಲ್ಲರೂ ಭಾವಿಸುತ್ತಾರೆ. ಅದು ನಿಜವಲ್ಲ. ನನಗೆ ದೈವಿಕ ಚಿಂತನೆಗಳಿವೆ. ಆದಾಗ್ಯೂ, ನಾನು ಮೂಢನಂಬಿಕೆಗಳನ್ನು ಒಪ್ಪುವುದಿಲ್ಲ. ಯಾವುದನ್ನೂ ವಿಜ್ಞಾನದ ದೃಷ್ಟಿಯಿಂದ ಯೋಚಿಸುತ್ತೇನೆ,” ಎಂದಿದ್ದರು.

 

Share Post