Politics

ಊಟಿಯಲ್ಲಿ ಕಾಲಕಳೆಯುತ್ತಿರುವ ಸಿದ್ದರಾಮಯ್ಯ ವಿರುದ್ಧ ಆರ್‌.ಅಶೋಕ್‌ ಕಿಡಿ

ಬೆಂಗಳೂರು; ಚುನಾವಣೆ ಮುಗಿಯುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ರಿಲ್ಯಾಕ್ಸ್‌ ಮೂಡ್‌ಗೆ ತೆರಳಿದ್ದಾರೆ.. ಅವರು ಊಟಿ ಪ್ರವಾಸ ಕೈಗೊಂಡಿದಾರೆ.. ಇದಕ್ಕೆ ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಆರ್‌.ಅಶೋಕ್‌, ಸಿದ್ದರಾಮಯ್ಯ ಸರ್ಕಾರದ ಎಡವಟ್ಟುಗಳ ಬಗ್ಗೆ ಬರೆದುಕೊಂಡಿದ್ದಾರೆ.. ಅದರ ಯಥಾವತ್‌ ವಿವರ ಇಲ್ಲಿದೆ..

ಸಾಮಾಜಿಕ ಜಾಲತಾಣದಲ್ಲಿ ಆರ್‌.ಅಶೋಕ್‌ ಬರೆದಿರುವುದೇನು..?

ಊಟಿಯಲ್ಲಿ ಪಾರ್ಟಿ ಮಾಡುತ್ತಿರುವ ಸೋಗಲಾಡಿ ಸಿಎಂ @siddaramaiah ನವರೇ,

ತಾವು ಊಟಿಯಲ್ಲಿ ಪಾರ್ಟಿ ಮಾಡುತ್ತಿರುವಾಗ ಇಲ್ಲಿ ಕನ್ನಡಿಗರು ನಿಮ್ಮ ಸರ್ಕಾರದ ಎಡವಟ್ಟುಗಳಿಂದ, ದುರಾಡಳಿತದಿಂದ, ಬೇಜವಾಬ್ದಾರಿಯಿಂದ ಅನುಭವಿಸುತ್ತಿರುವ ಸಂಕಷ್ಟಗಳ ಬಗ್ಗೆಯೂ ಒಮ್ಮೆ ನೆನಪಿಸಿಕೊಳ್ಳಿ.

ಸಿದ್ದರಾಮಯ್ಯನವರ ಸರ್ಕಾರದ ಎಡವಟ್ಟುಗಳು…

1. ಕೇಂದ್ರ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು 3,454 ಕೋಟಿ ರೂಪಾಯಿ ಬಿಡುಗಡೆ ಮಾಡಿ 2 ವಾರ ಕಳೆದರೂ ಒಂದು ನಯಾ ಪೈಸೆ ಬರ ಪರಿಹಾರ ಇನ್ನೂ ರೈತರ ಕೈಸೇರಿಲ್ಲ.

2. ಹೈನುಗಾರರಿಗೆ 7 ತಿಂಗಳಿಂದ ಬಾಕಿ ಇರುವ 700 ಕೋಟಿ ರೂಪಾಯಿ ಇನ್ನೂ ಪಾವತಿ ಆಗಿಲ್ಲ.

3. ತೆಂಗು ಬೆಳೆಗಾರರ ನಷ್ಟದ ಬಗ್ಗೆ ಅಧ್ಯಯನ ನಡೆಸಲು ಇನ್ನೂ ಸಮಿತಿ ರಚಿಸಿಲ್ಲ.

4. ಹೆಣ್ಣು ಭ್ರೂಣ ಪತ್ತೆ ಹತ್ಯೆ ಪ್ರಕರಣದ ಜಾಲ ದಿನೇ ದಿನೇ ಹೆಚ್ಚಾಗುತ್ತಿದ್ದರೂ ಇನ್ನೂ SIT ರಚನೆ ಆಗಿಲ್ಲ.

5. ಅಂಗನವಾಡಿಗಳಲ್ಲಿ ಊಟ ಆರೈಕೆ ಸರಿ ಇಲ್ಲದೆ 2 ಲಕ್ಷಕ್ಕೂ ಹೆಚ್ಚು ಮಕ್ಕಳ ದಾಖಲಾತಿ ಕಡಿಮೆ ಆಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ.

6. ಆಂಬ್ಯುಲೆನ್ಸ್ ಚಾಲಕರಿಗೆ ಮೂರು ತಿಂಗಳಿಂದ ವೇತನ ಪಾವತಿ ಆಗಿಲ್ಲ.

7. ರಾಜ್ಯದಲ್ಲಿ ಬಂಡವಾಳ ವೆಚ್ಚ 20% ಕುಸಿತಗೊಂಡು ಅಭಿವೃದ್ಧಿ ಶೂನ್ಯತೆ ಆವರಿಸಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ.

8. ಸಿಇಟಿ ಪ್ರಶ್ನೆಪತ್ರಿಕೆ ಎಡವಟ್ಟಿನಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದ್ದರೂ ತಮಗೆ ಯಾವುದೇ ಚಿಂತೆಯಿಲ್ಲ.

9. ಒಂದು ವಾರದೊಳಗೆ ಬಾಕಿ ಬಿಲ್ ಪಾವತಿ ಆಗದಿದ್ದರೆ ಕಾಮಗಾರಿ ಸ್ಥಗಿತಗೊಳಿಸುತ್ತೇವೆ ಎಂದು ಗುತ್ತಿಗೆದಾರರ ಸಂಘದ ಗಡುವು ನೀಡಿದ್ದರೂ ನಿಮ್ಮ ಸರ್ಕಾರ ಕ್ಯಾರೆ ಎನ್ನುತ್ತಿಲ್ಲ.

10. ಹುಬ್ಬಳ್ಳಿಯ ಸಹೋದರಿ ನೇಹಾ ಅವರ ಲವ್ ಜಿಹಾದ್ ಪ್ರಕರಣದಲ್ಲಿ 120 ದಿನಗೊಳಗೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿದ್ದ ತಮಗೆ ಪ್ರಕರಣದ ತನಿಖೆ ಚುರುಕುಗೊಳಿಸುವ ಉದ್ದೇಶವೇ ಇಲ್ಲ.

ರಾಜ್ಯದಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ, ರಾಜ್ಯದ ರೈತರು, ಮಹಿಳೆಯರು, ಯುವಕರು, ಬಡವರು ಸಾಲು ಸಾಲು ಸಂಕಷ್ಟಗಳನ್ನು ಎದುರಿಸುತ್ತಿದ್ದರೂ ಊಟಿಯಲ್ಲಿ ಮಜಾ ಮಾಡಿಕೊಂಡು, ಪ್ರಧಾನಿ ಮೋದಿ ಅವರ ಬಗ್ಗೆ ಅನಾವಶ್ಯಕ ಟೀಕೆ ಮಾಡುತ್ತಾ ಚುನಾವಣೆ ನಂತರವೂ ರಾಜಕೀಯ ಮಾಡುತ್ತಿರುವ ತಮಗೆ ನಿಜಕ್ಕೂ ನಾಚಿಕೆ ಆಗಬೇಕು.

ಒಂದು ರಾಜ್ಯದ ಮುಖ್ಯಮಂತ್ರಿಯಾಗಿ, ದೇಶದ ಪ್ರಧಾನಮಂತ್ರಿಯಾಗಿ ಕಳೆದ 23 ವರ್ಷಗಳಿಂದ ಸತತವಾಗಿ ಸರ್ಕಾರದ ಮುಖ್ಯಸ್ಥರಾಗಿ ಒಂದು ದಿನವೂ ರಜೆ ತೆಗೆದುಕೊಳ್ಳದೆ ಜನರ ಸೇವೆ ಮಾಡುತ್ತಿರುವ ಮೋದಿ ಅವರೆಲ್ಲಿ ತಾವೆಲ್ಲಿ. ನಾಲ್ಕು ವಾರ ಪ್ರಚಾರ ಮಾಡಿದ್ದಕ್ಕೆ ಊಟಿಯಲ್ಲಿ ಪಾರ್ಟಿ ಮಾಡಲು ಹೋಗಿರುವ ತಮಗೆ ಮೋದಿ ಅವರ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ ಸಿದ್ದರಾಮಯ್ಯನವರೇ?

ರಾಜ್ಯದ ಜನತೆಯ ಸಂಕಷ್ಟಗಳಿಗೆ ಸ್ಪಂದಿಸದೆ ಊಟಿಯಲ್ಲಿ ಮಜಾ ಮಾಡಲು ಹೋಗಿರುವ ತಮಗೆ ರಾಜ್ಯದ ಜನರ ಬಗ್ಗೆ ಎಷ್ಟು ಮಾತ್ರ ಬದ್ಧತೆ ಇದೆ ಅಂತ ತಾವೇ ಜಗಜ್ಜಾಹೀರು ಮಾಡಿದ್ದೀರಿ.

Share Post