Politics

ಜೂನ್‌ 4ರಂದು ಯಾರು ದೊಣ್ಣೆ ಕೊಟ್ಟು ಹೊಡೆಸಿಕೊಳ್ತಾರೋ ನೋಡೋಣ; ಸಿಎಂಗೆ ಆರ್‌.ಅಶೋಕ್‌ ತಿರುಗೇಟು

ಬೆಂಗಳೂರು; ಬಿಎಂಟಿಸಿಯ ಎಲೆಕ್ಟ್ರಿಕ್‌ ಬಸ್‌ಗಳಿಗೆ ಗುತ್ತಿಗೆ ಚಾಲಕರ ನೇಮಕ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಆರ್‌.ಅಶೋಕ್‌ ನಡುವೆ ವಾಕ್ಸಮರ ಮುಂದುವರೆದಿದೆ.. ಮೊನ್ನೆ ಮಾತನಾಡಿದ್ದ ಆರ್‌.ಅಶೋಕ್‌, ಗುತ್ತಿಗೆ ಆಧಾರದ ಮೇಲೆ ಕೇರಳದ ಯುವಕರನ್ನು ಚಾಲಕರಾಗಿ ನೇಮಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದ್ದರು.. ಇದಕ್ಕೆ ಉತ್ತರಿಸಿದ್ದ ಸಿದ್ದರಾಮಯ್ಯ, ಇದು ಕೇಂದ್ರ ಸರ್ಕಾರದ ಯೋಜನೆ..  ನೀವು ನಿಮ್ಮ ಮೋದಿ ಸರ್ಕಾರವನ್ನು ಕೇಳಬಹುದು.. ಅದರ ಬದಲು ನಮಗೆ ದೊಣ್ಣೆ ಕೊಟ್ಟು ಹೊಡೆಸಿಕೊಳ್ಳುತ್ತಿದ್ದೀರಿ ಎಂದು ವ್ಯಂಗ್ಯವಾಡಿದ್ದರು.. ಇದಕ್ಕೆ ಈಗ ಆರ್‌.ಅಶೋಕ್‌ ತೀಕ್ಮ್ಣವಾಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.. ಈ ಬಗ್ಗೆ ಅವರು ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ..

ಆರ್‌.ಅಶೋಕ್‌ ಅವರ ಟ್ವೀಟ್‌ನ ಯಥಾವತ್‌ ಮಾಹಿತಿ ಇಲ್ಲಿದೆ;

ಸ್ವಾಮಿ ಸಿಎಂ @siddaramaiah ನವರೇ,

ನಿಮ್ಮ ಟ್ವೀಟ್ ನಾಚಿಕೆಗೇಡಿತನದ ಪರಮಾವಧಿಯೋ ಅಥವಾ ನಾನಿನ್ನೂ ಸಿಎಂ ಕುರ್ಚಿಯಲ್ಲಿ ಕೂತಿದ್ದೇನೆ ಎಂದು ತೋರಿಸುವ ಅನಿವಾರ್ಯತೆಯೋ ಅರ್ಥವಾಗುತ್ತಿಲ್ಲ.

ನಿಮ್ಮ ರೀತಿಯ ಅಹಂಕಾರದ ಮಾತುಗಳು ನನಗೆ ಬರುವುದಿಲ್ಲ, ಅದು ನನಗೆ ಬೇಡವೂ ಬೇಡ. ಆದರೆ ಜೂನ್ 4ರಂದು ಯಾರು ಯಾರಿಗೆ ದೊಣ್ಣೆ ಕೊಟ್ಟು ಹೊಡಿಸಿಕೊಳ್ಳುತ್ತಾರೆ, ಜೂನ್ 4 ರ ನಂತರ ಬಡಿಗೆಯಿಂದ ಹೊಡೆದು ಯಾರು ಯಾರನ್ನ ಕುರ್ಚಿಯಿಂದ ಕೆಳಗಿಳಿಸುತ್ತಾರೆ ನೋಡೋಣ.

ತಾವು ಅಪರೂಪಕ್ಕೆ ತಮ್ಮ ಪ್ರಗಾಢ ನಿದ್ದೆಯಿಂದ ಎದ್ದು ನನ್ನ ಒಂದು ಟೀಕೆಗೆ ಉತ್ತರ ನೀಡುವ ಶ್ರಮ ತೆಗೆದುಕೊಂಡಿದ್ದೀರಿ. ಮೊದಲು ಅದಕ್ಕೆ ಅಭಿನಂದನೆಗಳು. ಆದರೆ ಅದರಲ್ಲೂ ಮೈಯೆಲ್ಲಾ ಎಣ್ಣೆ ಸವರಿಕೊಂಡಿರುವಂತೆ ತಮ್ಮ ಕರ್ತವ್ಯದಿಂದ ಜಾರಿಕೊಂಡು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೋರಿಸುತ್ತೀರಲ್ಲ ತಮ್ಮ ಭಂಡತನಕ್ಕೆ ಏನು ಹೇಳಬೇಕು.

ಪತ್ರಿಕೆಗಳಲ್ಲಿ ಹತ್ತಾರು ಕೋಟಿ ಖರ್ಚು ಮಾಡಿ ಪುಟಗಟ್ಟಲೆ ಜಾಹೀರಾತು ಕೊಡುವಾಗ ಅದು ನಿಮ್ಮ ಯೋಜನೆ. ಹಸಿರು ಬಾವುಟ ತೋರಿಸಿ ಬಸ್ಸಿಗೆ ಚಾಲನೆ ನೀಡುವಾಗ ಅದು ತಮ್ಮ ಸರ್ಕಾರದ ಕೊಡುಗೆ. ಆದರೆ ಅದರಲ್ಲಿ ನ್ಯೂನತೆಗಳು ಕಂಡು ಬದರೆ ಅದು ಕೇಂದ್ರ ಸರ್ಕಾರದ ಹೊಣೆ. ಇದು ಯಾವ ಸೀಮೆ ಆಡಳಿತ ಸ್ವಾಮಿ? ತಮಗೆ ಕರ್ನಾಟಕದ ಜನತೆ ಅಧಿಕಾರ ಕೊಟ್ಟಿರುವುದು ಎಲ್ಲದಕ್ಕೂ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಕೈಚೆಲ್ಲಿ ಕುಳಿತುಕೊಳ್ಳಲಿ ಅಂತ ಅಲ್ಲ.

ನಿಮಗೆ ನಿಜವಾಗಿಯೂ ಕನ್ನಡಿಗರಿಗೆ ಉದ್ಯೋಗ ಸಿಗಬೇಕು ಎನ್ನುವ ಬದ್ಧತೆ ಇದ್ದಿದ್ದರೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಮನವರಿಕೆ ಮಾಡಿಕೊಡಬಹುದಿತ್ತಲ್ಲ? ಎಲ್ಲದಕ್ಕೂ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವ ತಾವು, ಎಲ್ಲದಕ್ಕೂ ಕೇಂದ್ರ ಮಂತ್ರಿಗಳಿಗೆ ಮನವಿ ಪತ್ರ ಕೊಡುವ ತಾವು ಇದಕ್ಕೆ ಮಾತ್ರ ಯಾಕೆ ಮಾಡಲಿಲ್ಲ. ಅಸಲಿಗೆ ನಾನು ಈ ವಿಷಯ ಪ್ರಸ್ತಾಪ ಮಾಡುವವರೆಗೂ ನಿಮಗೆ ಈ ವಿಷಯ ಗೊತ್ತೇ ಇರಲಿಲ್ಲ. ಇದು ನಿಮ್ಮ ಆಡಳಿತ ವೈಖರಿ.

ನಾಲ್ಕು ಅಹಂಕಾರದ ಮಾತುಗಳು ಆಡಿದ ಮಾತ್ರಕ್ಕೆ ವಿಪಕ್ಷಗಳ ಬಾಯಿ ಮುಚ್ಚಿಸಬಹುದು ಎಂದು ತಿಳಿದಿದ್ದರೆ ಅದು ತಮ್ಮ ಭ್ರಮೆ. ನಿಮ್ಮ ಭ್ರಮಾಲೋಕ ವಾಸ ಮುಂದುವರೆಯಲಿ, ಆಲ್ ದಿ ಬೆಸ್ಟ್!

Share Post