Politics

ಕಾಂಗ್ರೆಸ್ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್

ಖಾನಾಪುರ;  ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಾಗಲೆಲ್ಲಾ ರೈತರ ಪರವಾಗಿ, ಯುವಕರ ಪರವಾಗಿ, ಸಾಮಾಜಿಕ ಬದ್ಧತೆಯನ್ನು ಉಳಿಸಿಕೊಂಡು ಬಂದಿದೆ. ಎಲ್ಲರಿಗೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಖಾನಾಪುರದ ಶನಾಯಾ ಹಾಲ್ ನಲ್ಲಿ‌ ಶನಿವಾರ ನಡೆದ ಕಾರ್ಯಕರ್ತರ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಚಿವರು, ಕಾಂಗ್ರೆಸ್ ಎಂದೂ ಜನರಿಗೆ ಮೋಸ ಮಾಡಿಲ್ಲ. ಭಾವನೆಗಳನ್ನು ಕೆರಳಿಸಿ ಆಟವಾಡಿಲ್ಲ. ಈ ಬಾರಿಯೂ ಎಲ್ಲ ಪಂಚ ಗ್ಯಾರಂಟಿಗಳನ್ನೂ ಜಾರಿಗೊಳಿಸುವ ಮೂಲಕ ಜನರಿಗೆ ನೆಮ್ಮದಿಯ ಬದುಕು ಕಟ್ಟಿಕೊಡಲು ಪ್ರಯತ್ನಿಸಿದೆ ಎಂದು ಹೇಳಿದರು.

ಉತ್ತರ ಕನ್ನಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ದಕ್ಷ ಆಡಳಿತಕ್ಕೆ‌ ಹೆಸರಾಗಿರುವ ನಾಯಕಿ ಅಂಜಲಿ ನಿಂಬಾಳ್ಕರ್ ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಬಲಿಸಿ ಎಂದು ಹೆಬ್ಬಾಳ್ಕರ್ ಮನವಿ ಮಾಡಿದರು.

 ಡಾ.ಅಂಜಲಿ ನಿಂಬಾಳ್ಕರ್ ಅವರು ಕಳೆದ ಅವಧಿಯಲ್ಲಿ ಖಾನಾಪುರದ ಶಾಸಕರಾಗಿದ್ದ ವೇಳೆ ಸ್ಥಳೀಯ ಸಮಸ್ಯೆಗಳ ಬಗ್ಗೆ  ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸುತ್ತಿದ್ದರು‌. ಇದೇ ಧ್ವನಿ ದೆಹಲಿಯಲ್ಲೂ ಕೇಳಬೇಕು ಎಂದರೆ ಅಂಜಲಿ ನಿಂಬಾಳ್ಕರ್ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.

ನಮ್ಮ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ನಾಯಕಿಯನ್ನು ನಾವು ಆರಿಸಬೇಕಿದೆ. ಕಳೆದ ವಿಧಾನಸಭೆಯಲ್ಲಿ ಖಾನಾಪುರದ ಜನ ಅಂಜಲಿ ಅವರನ್ನು ಸೋಲಿಸಿದ್ದೆ ಒಂದು ಆಶ್ಚರ್ಯ. ಹಿಂದಿನ ಅವಧಿಯಲ್ಲಿ ನಾಲ್ಕು ವರ್ಷಗಳ ಕಾಲ ವಿರೋಧ ಪಕ್ಷದಲ್ಲಿ ಇದ್ದರೂ ಖಾನಾಪುರ ಕ್ಷೇತ್ರದಲ್ಲಿ ಅಂಜಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದರು. ಒಬ್ಬ ಮಹಿಳೆಯಾಗಿ ರಾಜಕೀಯದಲ್ಲಿ ಹೋರಾಡುವುದು ಅಷ್ಟು ಸುಲಭವಲ್ಲ ಎಂದು ಹೇಳಿದರು.

ಮನೆಯನ್ನು ನಿಭಾಯಿಸುವ ಮಹಿಳೆ ಇಡೀ ದೇಶವನ್ನು ನಿಭಾಯಿಸಲು ಸಾಮರ್ಥ್ಯ ಹೊಂದಿರುತ್ತಾಳೆ. ಹೀಗಾಗಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಉತ್ತರ ಕನ್ನಡ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಅಂಜಲಿ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸಿದ್ದಾರೆ ಎಂದು ಸಚಿವೆ ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರ ಮುಖಂಡತ್ವದಲ್ಲಿ ಈ ಮೂರು (ಬೆಳಗಾವಿ, ಚಿಕ್ಕೋಡಿ, ಉತ್ತರ ಕನ್ನಡ) ಕ್ಷೇತ್ರಗಳ ಚುನಾವಣೆ ನಡೆಯಲಿದೆ ಎಂದರು.‌ ನಾನು 1999 ರಲ್ಲಿ ಖಾನಾಪುರದಲ್ಲಿ ಸಾಮಾನ್ಯ ಕಾರ್ಯಕರ್ತೆಯಾಗಿ ರಾಜಕೀಯ ಜೀವನ ಆರಂಭಿಸಿದೆ‌. ನನ್ನ ರಾಜಕೀಯದ ಜನ್ಮ ಸ್ಥಳವೇ ಖಾನಾಪುರ ಎಂದು ಹೇಳಿದರು.

ಸಭೆಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ, ಖಾನಾಪುರ ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕಿ, ಕೆನರಾ ಕ್ಷೇತ್ರದ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಾಸಕ ಆಸೀಫ್ ಸೇಠ್, ಡಾ.ಜವಳಿ, ಗೌಸಲಾಲ್ ಪಟೇಲ್, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹದೇವ್ ಕೋಳಿ, ಗ್ರಾಮೀಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧು ಕವಳೇಕರ್, ಬ್ಲಾಕ್ ಕಾಂಗ್ರೆಸ್ ನ ಮಹಿಳಾ ಅಧ್ಯಕ್ಷೆ ಗೀತಾ ಅಂಬಡಗಟ್ಟಿ, ರಿಯಾಜ್ ಪಾಟೀಲ, ಅನಿತಾ ದಂಡಗಲ್ಕರ್, ಚಂಬಣ್ಣ ಹೊಸಮನಿ, ಶಂಕರಗೌಡ ಪಾಟೀಲ, ಪಕ್ಷದ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Share Post