ಕೋಲ್ಕತ್ತಾ ಪಾಲಿಕೆ ಚುನಾವಣೆಯಲ್ಲಿ ಟಿಎಂಸಿ ಅಬ್ಬರ; ಕಾಂಗ್ರೆಸ್, ಬಿಜೆಪಿ ತತ್ತರ
ಕೋಲ್ಕತ್ತಾ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತ್ತಾ ಪಾಲಿಕೆ ಚುನಾವಣೆಯಲ್ಲಿ ಈ ಬಾರಿಯೂ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ ಭರ್ಜರಿ ಮುನ್ನಡೆ ಸಾಧಿಸಿದೆ. 144 ಕ್ಷೇತ್ರಗಳ ಪಾಲಿಕೆ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಪಕ್ಷ 132 ಸ್ಥಾನಗಳಲ್ಲಿ ಭಾರಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಪಕ್ಷ ಕೇವಲ ಐದು ವಾರ್ಡ್‌ಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಕಾಂಗ್ರೆಸ್ ಹಾಗೂ ಎಡಪಕ್ಷ ಸಿಪಿಎಂ ತಲಾ ಎರಡು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿವೆ.
ಕಳೆದ ಚುನಾವಣೆಯಲ್ಲಿ ಕೂಡಾ ತೃಣಮೂಲ ಕಾಂಗ್ರೆಸ್ ಭರ್ಜರಿ ಬಹುಮತ ಗಳಿಸಿತ್ತು. 144 ಸ್ಥಾನಗಳ ಪೈಕಿ ಟಿಎಂಸಿ 114 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಆದರೆ ಇನ್ನೂ ಹೆಚ್ಚಿನ ಸ್ಥಾನಗಳಲ್ಲಿ ಜಯ ಗಳಿಸುವ ಎಲ್ಲಾ ಲಕ್ಷಣಗಳೂ ಕಾಣಿಸುತ್ತಿವೆ. ಕಳೆದ ಬಾರಿ ಎರಡಂಕಿ ದಾಟಿದ್ದ ಎಡಪಕ್ಷಗಳು ಈ ಬಾರಿ ಒಂದಂಕಿಗೆ ತೃಪ್ತಿಪಟ್ಟುಕೊಳ್ಳುತ್ತಿವೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಿಪ್ಪರಲಾಗ ಹಾಕಿದರೂ, ಮಮತಾ ಬ್ಯಾನರ್ಜಿ ಮುಂದೆ ಗೆಲ್ಲುವುದಕ್ಕೆ ಸಾಧ್ಯವಾಗುತ್ತಿಲ್ಲ.