Politics

ಸಭಾತ್ಯಾಗ ಮಾಡಿದ ಬಿಜೆಪಿ ವಿರುದ್ಧ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಿಡಿ

ಬೆಂಗಳೂರು; ಬಜೆಟ್ ವೇಳೆ ಸಭಾ ತ್ಯಾಗ ಮಾಡಿದ ವಿರೋಧ ಪಕ್ಷಗಳ ವಿರುದ್ಧ ಕಿಡಿ ಕಾಡಿರುವ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಬಿಜೆಪಿ ಹಾಗೂ ಜೆಡಿ ಎಸ್ ಸದಸ್ಯರು ಸದನದ ಗೌರವಕ್ಕೆ ದಕ್ಕೆ ತಂದಿದ್ದಾರೆ.

ಕೇಂದ್ರ ಸರ್ಕಾರದ ಅಸಹಕಾರದ ನಡುವೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಎಲ್ಲಾ ಕ್ಷೇತ್ರಗಳಿಗೆ ಸಮಾನಾಗಿ ಅನುದಾನ ಹಂಚಿಕೆ ಮಾಡಿದ್ದಾರೆ. ಅವರದ್ದೆ (ಬಿಜೆಪಿ) ಸರ್ಕಾರ ಕೇಂದ್ರದಲ್ಲಿದ್ದು, ಜಿಎಸ್ ಟಿ ಸೇರಿದಂತೆ ಇನ್ನಿತರ ಯಾವುದೇ ಅನುದಾನ ಬಿಡುಗಡೆ ಮಾಡಲು ಒತ್ತಡ ಹೇರಿಲ್ಲ. ಬದಲಿಗೆ ರಾಜಕೀಯ ಮಾಡಿಕೊಂಡೇ ಬಂದಿದ್ದಾರೆ ಎಂದು ಸಚಿವರು ಆರೋಪಿಸಿದರು.

ರಾಜ್ಯದಲ್ಲಿ ಎದುರಾಗಿರುವ ಬರಗಾಲದ ನಡುವೆಯೂ ಸಿಎಂ ಸಿದ್ದರಾಮಯ್ಯ 3 ಲಕ್ಷದ 71 ಸಾವಿರದ 383 ಕೋಟಿ ಗಾತ್ರದ ಬಜೆಟ್ ಮಂಡಿಸಿದ್ದಾರೆ. ಜನಪ್ರಿಯ ಬಜೆಟ್ ಗೆ ಬಿಜೆಪಿ ಅವಮಾನ ಮಾಡಿದೆ. ಮುಂದಿನ ದಿನಗಳಲ್ಲಿ ಜನರೇ ಇದಕ್ಕೆ ಉತ್ತರ ನೀಡುವರು. ಯಾವುದೇ ಒಂದು ಸಮುದಾಯವನ್ನು ಒಲೈಸುವ ಬಜೆಟ್ ಇದಾಗಿಲ್ಲ. ಎಲ್ಲಾ ವರ್ಗದವರಿಗೆ ಸಲ್ಲುವ ಬಜೆಟ್ ಇದಾಗಿದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ತಿರುಗೇಟು ನೀಡಿದರು.

2024-25ನೇ ಸಾಲಿನಲ್ಲಿ ಮಹಿಳಾ ಉದ್ದೇಶಿತ ಯೋಜನೆಗಳಿಗೆ 86,423 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಇಲಾಖೆಯ ಬಹುತೇಕ ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ. ಮಕ್ಕಳ ಉದ್ದೇಶಿತ ಯೋಜನೆಗಳಿಗೆ ಬಜೆಟ್‌ನಲ್ಲಿ 54,617 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.

ಪ್ರಸಕ್ತ ಸಾಲಿನಲ್ಲಿ ಇಲಾಖೆ ನಿರೀಕ್ಷಿಸಿದಷ್ಟು ಬಜೆಟ್‌ ದಕ್ಕಿದ್ದು, ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಗೃಹಲಕ್ಷ್ಮಿಗೆ ಈ ಸಾಲಿನಲ್ಲಿ 28,608 ಕೋಟಿ ರೂ. ಒದಗಿಸಲಾಗಿದೆ. ಇದರಿಂದ ಕುಟುಂಬ ನಿರ್ವಹಣೆಯ ಜೊತೆಗೆ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮಹಿಳೆಯರಿಗೆ ಈ ಯೋಜನೆ ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.

 

Share Post