Politics

ಕಾಂಗ್ರೆಸ್ ಕಾವೇರಿ ಗ್ಯಾರಂಟಿ ಕೊಡಬೇಕು; ಹೆಚ್.ಡಿ.ಕುಮಾರಸ್ವಾಮಿ ಆಗ್ರಹ

ಮಂಡ್ಯ; ಗ್ಯಾರಂಟಿಗಳ ಮೂಲಕ ಜನರ ಕಣ್ಣಿಗೆ ಕಾಂಗ್ರೆಸ್ ಸರಕಾರ ಮಂಕುಬೂದಿ ಎರಚುತ್ತಿದೆ. ಮಂಡ್ಯ ಜನರಿಗೆ ಕಾವೇರಿ ನೀರಿನ ಗ್ಯಾರಂಟಿ ಕೊಡಲಿ ಎಂದು ಸವಾಲು ಹಾಕಿದರು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು.

ಮಳವಳ್ಳಿ ತಾಲ್ಲೂಕಿನ ಬೆಳಕವಾಡಿಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು; ಕೇವಲ ಗ್ಯಾರಂಟಿಗಳ ಹೆಸರಿನಲ್ಲಿ ಕಾಂಗ್ರೆಸ್ ಮತ ಯಾಚನೆ ಮಾಡುತ್ತಿದೆ. ಆದರೆ, ಮಂಡ್ಯ ಜಿಲ್ಲೆಯಲ್ಲಿ ಸರ್ಕಾರವೇ ಸೃಷ್ಟಿಸಿರುವ ಕೃತಕ ಬರಗಾಲದಿಂದ ಕಬ್ಬು, ಭತ್ತದ ಬೆಳೆ ಒಣಗಿ ಹೋಗಿದೆ. ಕಾವೇರಿ ನೀರಿನ ವಿಚಾರದಲ್ಲಿ ಈ ಸರ್ಕಾರ ಜಿಲ್ಲೆಯ ಜನರಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪ ಮಾಡಿದರು.

ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆ ಮಾಡಲು ಕರ್ನಾಟಕಕ್ಕೆ ಅವಕಾಶ ಕೊಡುವುದಿಲ್ಲ. ಕೇಂದ್ರ ಅನುಮತಿ ಕೊಡುವುದಕ್ಕೂ ಬಿಡುವುದಿಲ್ಲ ಎಂದು ಕಾಂಗ್ರೆಸ್ ಮಿತ್ರಪಕ್ಷ ತಮಿಳುನಾಡಿನ ಡಿಎಂಕೆ ಪಕ್ಷ ತನ್ನ ಲೋಕಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಬರೆದುಕೊಂಡಿದೆ. ರಾಜ್ಯದ ಹಿತಾಸಕ್ತಿಗೆ ಮಾರಕವಾದ ಅನ್ಯ ರಾಜ್ಯದ ಪಕ್ಷದ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ಕನ್ನಡಿಗರಿಗೆ ಅನ್ಯಾಯ ಮಾಡುತ್ತಿದೆ ಎಂದು ಕುಮಾರಸ್ವಾಮಿ ಅವರು ನೇರ ಆರೋಪ ಮಾಡಿದರು.

ಕನ್ನಡಿಗರ ಮೇಲೆ ಕಾಂಗ್ರೆಸ್ ಪಕ್ಷಕ್ಕೆ ನಿಜಕ್ಕೂ ಕಾಳಜಿ ಇದ್ದರೆ ತಮಿಳುನಾಡಿನವರು ಕೇಂದ್ರದಲ್ಲಿ ಹಾಕಿರುವ ತಕರಾರು ಅರ್ಜಿಗಳನ್ನು ಹಿಂಪಡೆಯಲು ಕಾಂಗ್ರೆಸ್ ಪ್ರಯತ್ನ ಮಾಡಲಿ. ಅವರ ಮಿತ್ರಪಕ್ಷದ ಮನವೊಲಿಸಲಿ. ಡಿಎಂಕೆ ನಾಯಕ ಸ್ಟಾಲಿನ್ ಅವರ ಮನವೊಲಿಸಲಿ. ಕಾಂಗ್ರೆಸ್ ಆ ಕೆಲಸ ಮಾಡಿದರೆ ಕೇಂದ್ರದಿಂದ ಮೇಕೆದಾಟು ಯೋಜನೆಗೆ ಅನುಮತಿ ಕೊಡಿಸಿ, ಅದಕ್ಕೆ ಹಣ ಬಿಡುಗಡೆ ಮಾಡಿಸುವುದು ನನ್ನ ಜವಾಬ್ದಾರಿ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಕಾಂಗ್ರೆಸ್ ರಾಜ್ಯಕ್ಕೆ ಬೇಕಾದ ಶಾಶ್ವತ ಕೆಲಸಗಳನ್ನು ಮಾಡುವುದು ಬಿಟ್ಟು ಅಗ್ಗದ ಕಾರ್ಯಕ್ರಮಗಳಿಗೆ ಜೋತು ಬಿದ್ದು ಜನರನ್ನು ಯಮಾರಿಸುತ್ತಿದೆ. ಜನರ ಬದುಕಿನ ಜತೆ ಚೆಲ್ಲಾಟ ಆಡುತ್ತಿದೆ. ಕಾವೇರಿ ನೀರಿನ ಬಗ್ಗೆ ಚಕಾರ ಎತ್ತದ ಕಾಂಗ್ರೆಸ್, ಡಿಎಂಕೆ ಪ್ರಣಾಳಿಕೆ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಸಮಯಕ್ಕೆ ತಕ್ಕ ರಾಜಕಾರಣ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುತ್ತಿದೆ ಎಂದು ಅವರು ಕಿಡಿಕಾರಿದರು.

ಮಾಜಿ ಶಾಸಕ ಡಾ.ಕೆ.ಅನ್ನದಾನಿ, ಮಾಜಿ ಸಚಿವರಾದ ವೆಂಕಟರಾವ್ ನಾಡಗೌಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ ಸೇರಿದಂತೆ ಬಿಜೆಪಿ ಜೆಡಿಎಸ್ ಪಕ್ಷದ ಅನೇಕ ನಾಯಕರು, ಕಾರ್ಯಕರ್ತರು, ಸಾರ್ವಜನಿಕರು ದೊಡ್ಡ ಪ್ರಮಾಣದಲ್ಲಿ ನೆರೆದಿದ್ದರು.

Share Post