Politics

15 ದಿನದಲ್ಲಿ ಸಂಪುಟ ವಿಸ್ತರಿಸಿ, ಇಲ್ಲದಿದ್ದರೆ ಎಲ್ರೂ ಹೊರಹೋಗ್ತಾರೆ; ಬಸನಗೌಡ ಪಾಟೀಲ್‌ ಯತ್ನಾಳ್‌

ಬೆಂಗಳೂರು: ಹದಿನೈದು ದಿನದಲ್ಲಿ ಸಂಪುಟ ವಿಸ್ತರಣೆ ಮಾಡುವುದಾದರೆ ಮಾಡಿ, ಅನಂತರ ಮಾಡಿದರೆ ಏನೂ ಪ್ರಯೋಜನವಿಲ್ಲ. ಸಂಪುಟ ವಿಸ್ತರಣೆ ಮಾಡಿ ಸ್ಥಾನಮಾನ ನೀಡದೇ ಇದ್ದರೆ, ಉತ್ತರ ಪ್ರದೇಶದಂತೆ ಎಲ್ಲರೂ ಹೊರಹೋಗ್ತಾರೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಎಚ್ಚರಿಸಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು, ಹದಿನೈದು ದಿನದೊಳಗೆ ಸಂಪುಟ ವಿಸ್ತರಣೆ ಮಾಡಬೇಕೆಂದು ಆಗ್ರಹಿಸಿದರು. ಮುಂದಿನ ವರ್ಷವೇ ಚುನಾವಣೆ ಎದುರಾಗಲಿದೆ. ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ತಡ ಮಾಡಿದರೆ ಏನೂ ಪ್ರಯೋಜನವಿಲ್ಲ ಎಂದು ಹೇಳಿದ್ದಾರೆ. ಸೂಕ್ತ ಸ್ಥಾನಮಾನ ಸಿಗದಿದ್ದಕ್ಕೆ ಹಲವರಿಗೆ ಅಸಮಾಧಾನವಿದೆ. ಅವರು ಉತ್ತರ ಪ್ರದೇಶದಂತೆ ಹೊರಹೋಗುವ ಅಪಾಯವಿದೆ. ಹಲವರು ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಜತೆ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದಾರೆ. ಹೊರಗಿನಿಂದ ಬಂದ ಕೆಲವರಿಗೆ ನಿಷ್ಠೆಯೇ ಇಲ್ಲ ಎಂದು ಬಸನಗೌಡ ಪಾಟೀಲ್‌ ಯತ್ನಾಳ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಶಾಸಕ ಎಂ.ಪಿ.ರೇಣುಕಾಚಾರ್ಯ ಭೇಟಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನಾನು ರೇಣುಕಾಚಾರ್ಯ ವಿರುದ್ಧ ಎಂದೂ ಮಾತನಾಡಿಲ್ಲ. ಅವರು ನಮ್ಮ ಪಕ್ಷದ ಶಾಸಕರು. ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದರಲ್ಲಿ ತಪ್ಪೇನಿದೆ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪ್ರಶ್ನಿಸಿದರು.

 

Share Post