Politics

ಮುಲಾಯಂ ಸಿಂಗ್‌ ಸೊಸೆ ಅಪರ್ಣಾ ಯಾದವ್‌ ಬಿಜೆಪಿ ಸೇರ್ಪಡೆ..!

ಲಖನೌ:ವಿಧಾನಸಭಾ ಚುನಾವಣೆ ಘೋಷಣೆಗಿದ್ದೇ ಆಗಿದ್ದು, ಉತ್ತರ ಪ್ರದೇಶದಲ್ಲಿ ರಾಜಕೀಯ ಪಲ್ಲಟಗಳು ನಡೆಯುತ್ತಲೇ ಇವೆ. ಪಕ್ಷಾಂತರ ಪರ್ವ ಜೋರಾಗೇ ನಡೆಯುತ್ತಿದೆ. ಅದಕ್ಕಿಂತ ವಿಶೇಷ ಎಂದರೆ ನಿರೀಕ್ಷೆಯಂತೆ ಸಮಾಜವಾದಿ ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್‌ ಯಾದವ್‌ ಅವರ ಕಿರಿಯ ಸೊಸೆ ಬಿಜೆಪಿ ಸೇರ್ಪಡೆಯಾಗಿದ್ದಾರೆ.

    ಉಪಮುಖ್ಯಮಂತ್ರಿ ಕೇಶವ್‌ ಪ್ರಸಾದ್‌ ಮೌರ್ಯ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್‌ ಸಿಂಗ್‌ ಅವರು ಇಂದು ಮುಲಾಯಂ ಸಿಂಗ್‌ ಯಾದವ್‌ ಸೊಸೆ ಅಪರ್ಣಾ ಸಿಂಗ್‌ ಯಾದವ್‌ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಲಖನೌನಲ್ಲಿ ನಡೆದ ಸರಳ ಸಮಾರಂಭದಲ್ಲಿ ಅಪರ್ಣಾ ಸಿಂಗ್‌ ಯಾದವ್‌ ಅವರಿಗೆ ಬಿಜೆಪಿ ಪಕ್ಷದ ಸದಸ್ಯತ್ವ ನೀಡಿ, ಪಕ್ಷಕ್ಕೆ ಸ್ವಾಗತಿಸಲಾಯಿತು.

೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಅಪರ್ಣಾ ಸಿಂಗ್‌ ಯಾದವ್‌ ಅವರು ಸಮಾವಾದಿ ಪಕ್ಷದಿಂದ ಸ್ಪರ್ಧಿಸಿ, ಬಿಜೆಪಿಯ ರಿಟಾ ಬಹುಗುಣ ಜೋಷಿ ವಿರುದ್ಧ ಸೋತಿದ್ದರು. ಅದಾದ ನಂತರ ಅವರು, ಬಿಜೆಪಿ ಪರವಾಗಿ ಬ್ಯಾಟ್‌ ಬೀಸುತ್ತಾ ಬಂದಿದ್ದಾರೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಹೊಗಳುತ್ತಿದ್ದರು. ಈ ಹಿನ್ನೆಲೆಯಲ್ಲಿ ಅಪರ್ಣಾ ಸಿಂಗ್‌ ಯಾದವ್‌ ಅವರು ಬಿಜೆಪಿ ಸೇರುತ್ತಾರೆಂಬ ಮಾತುಗಳು ಕೇಳಿಬಂದಿದ್ದವು. ನಿರೀಕ್ಷೆಯಂತೆ ಅವರು ಇಂದು ಬಿಜೆಪಿ ಸೇರಿದ್ದಾರೆ.

ಒಂದು ಪಕ್ಷದ ನಾಯಕರ ಮನೆಯ ಸೊಸೆಯೇ ಬೇರೆ ಪಕ್ಷ ಸೇರಿದ್ದಾರೆ. ಇದು ಉತ್ತರ ಪ್ರದೇಶದ ಚುನಾವಣೆಯಲ್ಲಿ ಯಾವ ರೀತಿ ಪರಿಣಾಮ ಬೀರುತ್ತದೋ ನೋಡಬೇಕಾಗಿದೆ.

Share Post