HistoryLifestyleNational

ಪತ್ನಿಗಾಗಿ ತಾಜ್‌ಮಹಲ್‌ ಮಾದರಿ ಮನೆ ಕಟ್ಟಿಸಿಕೊಟ್ಟ ಪತಿ..!

   ಆಗ್ರಾದ ತಾಜ್‌ಮಹಲ್‌ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಆದ್ರೆ, ತಾಜ್‌ಮಹಲ್‌ ನೋಡೋದಕ್ಕೆ ಈಗ ಆಗ್ರಾಕ್ಕೇ ಹೋಗಬೇಕಾಗಿಲ್ಲ. ಮಧ್ಯಪ್ರದೇಶದ ಬರ್ಹಾನ್‌ಪುರಕ್ಕೆ ಭೇಟಿ ಕೊಟ್ಟರೆ ಸಾಕು ಆಧುನಿಕ ತಾಜ್‌ ಮಹಲ್‌ ನಿಮ್ಮ ಕಣ್ಣಿಗೆ ಬೀಳುತ್ತದೆ. ಥೇಟ್‌ ತಾಜ್‌ಮಹಲ್‌ನ್ನೇ ಹೋಲುವ ಕಟ್ಟಡವನ್ನು ಇಲ್ಲಿನ ಶಿಕ್ಷಣತಜ್ಞರೊಬ್ಬರು ಕಟ್ಟಿಸಿದ್ದಾರೆ. ಇದೀಗ ಈ ಕಟ್ಟಡ ದೇಶದ ಜನರ ಗಮನ ಸೆಳೆಯುತ್ತಿದೆ.  

 ಶಿಕ್ಷಣತಜ್ಞರಾಗಿ ಸಾಕಷ್ಟು ಹೆಸರು ಮಾಡಿರುವ  ಆನಂದ್‌ ಪ್ರಕಾಶ್‌ ಚೌಕ್ಸಿ ಬರ್ಹಾನ್‌ಪುರದಲ್ಲಿ ಆಸ್ಪತ್ರೆ ಹಾಗೂ ಪ್ರತಿಷ್ಠಿತ ಶಾಲೆಯನ್ನು ಹೊಂದಿದ್ದಾರೆ. ಈ ಶಾಲೆಯ ಆವರಣದಲ್ಲಿ ಈಗ ಭವ್ಯವಾದ ತಾಜ್‌ಮಹಲ್‌ ತದ್ರೂಪದಂತಿರುವ ಮನೆ ನಿರ್ಮಾಣವಾಗಿದೆ. ಅಂದು ಶಹಜಹಾನ್‌ ತನ್ನ ಪತ್ನಿಯ ನೆನಪಿಗಾಗಿ ತಾಜ್‌ ಮಹಲ್‌ ಕಟ್ಟಿಸಿದರೆ, ಇಂದು ಆನಂದ್ ಪ್ರಕಾಶ್‌ ಚೌಕ್ಸಿ ತನ್ನ ಪ್ರೀತಿಯ ಪತ್ನಿ ಮಂಜೂಷಾ ಚೌಕ್ಸಿಗಾಗಿ ಈ ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ಥೇಟ್‌ ತಾಜ್‌ಮಹಲ್‌ನಂತೆಯೇ ಎಲ್ಲವನ್ನೂ ನಿರ್ಮಿಸಲಾಗಿದೆ.  

 ಇದು ಮೂಲ ತಾಜ್‌ಮಹಲ್‌ನ ಮೂರನೇ ಒಂದು ಭಾಗದಷ್ಟಿದೆ. ಇದನ್ನು ಕಟ್ಟುವುದಕ್ಕೂ ಮೊದಲು ಚೌಕ್ಸಿ ದಂಪತಿ ಆಗ್ರಾಕ್ಕೆ ಭೇಟಿ ನೀಡಿ, ಅಲ್ಲಿನ ಕುಶಲ ಕಲೆಯನ್ನು ಗಮನಿಸಿದ್ದರು. ಎಂಜಿನಿಯರ್‌ಗಳು ಹಾಗೂ ಕುಶಲಕರ್ಮಿಗಳನ್ನು ಸಂಪರ್ಕಿಸಿ, ತಾಜ್‌ ಮಹಲ್‌ ರೀತಿಯಲ್ಲೇ ಮನೆ ನಿರ್ಮಿಸಿಕೊಡುವಂತೆ ಕೋರಿದ್ದರು. ಬರ್ಹಾನ್‌ಪುರ್‌ ಹಾಗೂ ಹೊರಗಿನ ಕುಶಲಕರ್ಮಿಗಳ ತಂಡ ಎರಡೂವರೆ ವರ್ಷಗಳ ಶ್ರಮವಹಿಸಿ ಈಗ ಈ ವಿನೂತನ ತಾಜ್‌ಮಹಲ್‌ ನಿರ್ಮಾಣ ಮಾಡಿದೆ. ತಾಜ್‌ಮಹಲ್‌ ನೋಡಲು ಆಗದ ಸ್ಥಳೀಯರು ಈಗ ಇದನ್ನೇ ನೋಡಿ ಕಣ್ತುಂಬಿಕೊಂಡು ಆನಂದಪಡಬಹುದು. ಇನ್ನು ಪ್ರೀ ವೆಡ್ಡಿಂಗ್‌ ಶೂಟ್‌ಗೂ ಇದು ಹೇಳಿ ಮಾಡಿಸಿದಂತಿದೆ.

  ಈ ವಿನೂತನ ತಾಜ್‌ಮಹಲ್‌ ೫೫ ರಿಂದ ೬೦ ಅಡಿ ಎತ್ತರವಿದೆ. ಚೌಕ್ಸಿ ದಂಪತಿ ಸುಮಾರು ೮೦ ಅಡಿ ಎತ್ತರ ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದರು. ಆದರೆ ಇದಕ್ಕೆ ಸ್ಥಳೀಯ ಆಡಳಿತ ಅನುಮತಿ ನೀಡಲಿಲ್ಲ. ಹೀಗಾಗಿ, ಎತ್ತರವನ್ನು ೬೦ ಅಡಿಗೆ ಸೀಮಿತ ಮಾಡಲಾಯಿತು. ಈ ಭವ್ಯವಾದ ಮನೆಯಲ್ಲಿ ಒಂದು ದೊಡ್ಡ ಹಾಲ್‌ ಇದೆ. ನಾಲ್ಕು ಬೆಡ್‌ ರೂಂಗಳಿವೆ. ಒಂದು ವಿಶಾಲವಾದ ಅಡುಗೆ ಮನೆ, ಧ್ಯಾನದ ಕೊಠಡಿ, ಗ್ರಂಥಾಲಯ ಕೂಡಾ ಇದೆ. 

   ಈ ಮನೆಯ ಗುಮ್ಮಟ 29 ಅಡಿ ಎತ್ತರವಿದೆ. ಮನೆಯ ನೆಲಹಾಸನ್ನು ರಾಜಸ್ಥಾನದ ಮಕ್ರಾನಾದಿಂದ ಮಾಡಿಸಲಾಗಿದೆ. ಮುಂಬೈನ ಕುಶಲಕರ್ಮಿಗಳು ಮನೆಯ ಪೀಠೋಪಕರಣಗಳನ್ನು ಸಿದ್ಧಪಡಿಸಿದ್ದಾರೆ. ತಾಜ್ ಮಹಲ್‌ನಂತೆಯೇ, ಅದರ ನವೀನ ಬೆಳಕಿನಿಂದಾಗಿ ಇಡೀ ಮನೆ ಕತ್ತಲೆ ಸಮಯದಲ್ಲಿ ಹೊಳೆಯುತ್ತದೆ.

  2018ರಲ್ಲಿ ಈ ಮನೆಯ ಕಾಮಗಾರಿ ಆರಂಭವಾಗಿ 2021ರಲ್ಲಿ ಪೂರ್ಣಗೊಂಡಿದೆ. ನಿರ್ಮಾಣ ಮಾಡುವಾಗ ಎಂಜಿನಿಯರ್‌ಗಳಿಗೆ ಹಲವು ರೀತಿಯ ಸವಾಲುಗಳು ಎದುರಾಗಿದ್ದವು. ಹೀಗಾಗಿ, ಎಂಜಿನಿಯರ್‌ಗಳು ಪಶ್ಚಿಮ ಬಂಗಾಳ ಹಾಗೂ ಇಂಧೋರ್‌ ಮೂಲದ ಕುಶಲಕರ್ಮಿಗಳ ಸಹಾಯ ಪಡೆಯುತ್ತಾರೆ. ಅವರ ನೆರವಿನಿಂದ ಮನೆಯ ಒಳಭಾಗದ ಕಲಾ ವಿನ್ಯಾಸ ಮಾಡಲಾಗಿದೆ.

ಇದೇ ರೀತಿ ಔರಂಗಾಬಾದ್‌ನಲ್ಲೂ ಬಡ ಮುಸ್ಲಿಂ ವೃದ್ಧನೊಬ್ಬ ತನ್ನ ಪತ್ನಿಯ ನೆನಪಿಗಾಗಿ ತಾಜ್‌ ಮಹಲ್‌ ರೀತಿಯ ಸಣ್ಣ ಕಟ್ಟಡ ನಿರ್ಮಿಸಿದ್ದಾನೆ. ಕೂಲಿ ಮಾಡಿ ಜೀವನ ನಡೆಸುವ ವೃದ್ಧ, ತನ್ನ ದುಡಿಮೆಯನ್ನೆಲ್ಲಾ ಖರ್ಚು ಮಾಡಿ, ತನ್ನ ಪತ್ನಿಗೆ ಮಹಲ್‌ ನಿರ್ಮಿಸಿದ್ದಾರೆ. ಕೆಲ ವರ್ಷಗಳ ಹಿಂದೆ ಈ ವೃದ್ಧ ಸಾವನ್ನಪ್ಪಿದ್ದಾರೆ.

Share Post