ಶೀನಾ ಬೋರಾ ಹತ್ಯೆ ಕೇಸ್; ಇಂದ್ರಾಣಿ ಮುಖರ್ಜಿಗೆ ಬಿಡುಗಡೆ ಭಾಗ್ಯ
ನವದೆಹಲಿ; ಶೀನಾ ಬೋರಾ ಹತ್ಯೆ ಕೇಸ್‌ನ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿಗೆ ಕೊನೆಗೂ ಬಿಡುಗಡೆಯ ಭಾಗ್ಯ ಸಿಕ್ಕಿದೆ. ಸುಪ್ರೀಂ ಕೋರ್ಟ್ ಇಂದು ಇಂದ್ರಾಣಿ ಮುಖರ್ಜಿಗೆ ಜಾಮೀನು ಮಂಜೂರು ಮಾಡಿದೆ.
2012ರ ಮೇ 23ರಂದು ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪೆನ್ ತಾಲೂಕಿನಲ್ಲಿ 24 ವರ್ಷದ ಶೀನಾ ಬೋರಾ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ, ಆರೂವರೆ ವರ್ಷಗಳಿಂದ ಜೈಲುವಾಸ ಅನುಭವಿಸುತ್ತಿದ್ದರು. ಆದ್ರೆ ಪ್ರಕರಣದ ವಿಚಾರಣೆ ಇನ್ನೂ ಮುಕ್ತಾಯವಾಗಿಲ್ಲ. ಶೀಘ್ರದಲ್ಲೇ ಅದು ಕೊನೆಗೊಳ್ಳುವ ಲಕ್ಷಣಗಳೂ ಇಲ್ಲ. ಈ ಕಾರಣದಿಂದಾಗಿ ಕೆಲವೊಂದು ಷರತ್ತುಗಳನ್ನು ವಿಧಿಸಿ ಇಂದ್ರಾಣಿ ಮುಖರ್ಜಿ ಬಿಡುಗಡೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
ಪ್ರಕರಣದ ಮತ್ತೊಬ್ಬ ಆರೋಪಿ ಪೀಟರ್ ಮುಖರ್ಜಿ ಫೆಬ್ರವರಿ 2020 ರಿಂದ ಜಾಮೀನಿನ ಮೇಲಿದ್ದಾರೆ. ಅವರ ಮೇಲೆ ಹೇರಿರುವ ಎಲ್ಲಾ ಷರತ್ತುಗಳೂ ಇಂದ್ರಾಣಿ ಅವರಿಗೂ ಅನ್ವಯವಾಗುತ್ತವೆ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ. ಇಂದ್ರಾಣಿ, ಆಕೆಯ ಮೊದಲ ಪತಿ ಸಂಜೀವ್ ಖನ್ನಾ, ಎರಡನೇ ಪತಿ ಮತ್ತು ಮಾಧ್ಯಮ ಕ್ಷೇತ್ರದ ಉದ್ಯಮಿ ಪೀಟರ್ ಮುಖರ್ಜಿ ಪ್ರಕರಣದ ಆರೋಪಿಗಳಾಗಿದ್ದಾರೆ.