National

ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣದ ಅನಾಹುತಗಳ ವಿವರಣೆ:ಮೋದಿಗೆ ಸಿದ್ದು ಪತ್ರ

ದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆತ ಮತ್ತು ಖಾಸಗೀಕರಣದಿಂದ ಆಗುವ ಅನಾಹುತಗಳನ್ನು ವಿವರಿಸಿ ಮಾನ್ಯ ಪ್ರಧಾನ ಮಂತ್ರಿಗಳಿಗೆ ಮಾನ್ಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ. ಪತ್ರದ ಸಾರಾಂಶ ಕೆಳಕಂಡಂತಿದೆ.

ಕೇಂದ್ರ ಸರ್ಕಾರ ಕಳೆದ ಎಂಟು ವರ್ಷಗಳಲ್ಲಿ ದೇಶದ ಆರ್ಥಿಕತೆಯನ್ನು ಹಾಳುಗೆಡವಿದ್ದು ಮತ್ತು ಆದಾಯ ಹೆಚ್ಚಿಸುವಲ್ಲಿ ವಿಫಲವಾಗಿದ್ದರ ಪರಿಣಾಮವಾಗಿ ಜಾರಿಗೆ ತರುತ್ತಿರುವ ಬಂಡವಾಳ ಹಿಂತೆಗೆತದ ಯೋಜನೆಗೆ ಬ್ಯಾಂಕಿಂಗ್ ವಲಯವನ್ನು ಗುರಿ ಮಾಡಲಾಗಿದೆ. ಆರ್ಥಿಕತೆ ಚೇತರಿಸಿಕೊಳ್ಳಲು ಬ್ಯಾಂಕ್‍ಗಳಿಂದ ಹೂಡಿಕೆ ಹಿಂತೆಗೆದುಕೊಳ್ಳಲು ಸರ್ಕಾರ ತರಾತುರಿ ಮಾಡುತ್ತಿರುವುದು ಆತಂಕಕಾರಿ ಮತ್ತು ಆಧಾರರಹಿತ ಆರ್ಥಿಕ ವಿಧಾನವಾಗಿದೆ ಎಂದಿದ್ದಾರೆ.

ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆತವನ್ನು ಘೋಷಿಸಿದ್ದಾರೆ. ಇದರಿಂದ ದೇಶಾದ್ಯಂತ ಆತಂಕ ಸೃಷ್ಟಿಯಾಗಿದೆ. ಆರ್ಥಿಕ ತಜ್ಞರು, ರಾಜಕೀಯ ನಾಯಕರು ಮತ್ತು ಬ್ಯಾಂಕಿಂಗ್ ವಲಯದ ಹಿರಿಯರು ಸಚಿವೆ ನಿರ್ಮಾಲ ಸೀತಾರಾಮನ್ ಅವರ ಅನಾಹುತಕಾರಿ ತೀರ್ಮಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬ್ಯಾಂಕ್ ಉದ್ಯೋಗಿಗಳು ಹಾಗೂ ಠೇವಣಿದಾರರು ಮತ್ತು ಜನಸಾಮಾನ್ಯರೂ ಆತಂಕಗೊಂಡಿದ್ದಾರೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ಕಂಡರೆ ನಿಮಗೆ ಏಕೆ ಆಗುವುದಿಲ್ಲವೋ ಗೊತ್ತಿಲ್ಲ. ಕಳೆದ ವರ್ಷ 10 ರಾಷ್ಟ್ರೀಕೃತ ಬ್ಯಾಂಕ್‍ಗಳ ವಿಲೀನ ಘೋಷಿಸಿದಿರಿ. ಆ ಪ್ರಕಾರ ನಮ್ಮ ಕಾರ್ಪೋರೇಷನ್ ಬ್ಯಾಂಕನ್ನು ಯೂನಿಯನ್ ಬ್ಯಾಂಕ್‍ನೊಂದಿಗೆ, ಸಿಂಡಿಕೇಟ್ ಬ್ಯಾಂಕನ್ನು ಕೆನರಾ ಬ್ಯಾಂಕ್‍ನೊಂದಿಗೆ, ವಿಜಯ ಬ್ಯಾಂಕನ್ನು ಬ್ಯಾಂಡ್ ಆಫ್ ಬರೋಡದೊಂದಿಗೆ ವಿಲೀನಗೊಳಿಸಲಾಯಿತು. ಇದಕ್ಕೂ ಮೊದಲು ಸ್ಟೇಟ್ ಬ್ಯಾಂಕ್ ಆಫ್ ಮೈಸೂರನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ವಿಲೀನಗೊಳಿಸಿದಿರಿ. ಇದರಿಂದ ನಮ್ಮ ರಾಜ್ಯದ ನಾಲ್ಕು ಬ್ಯಾಂಕ್‍ಗಳು ತಮ್ಮ ಮೂಲ ಆಶಯ ಮತ್ತು ಅಸ್ತಿತ್ವವನ್ನು ಕಳೆದುಕೊಂಡು ರಾಷ್ಟ್ರೀಕೃತ ಬ್ಯಾಂಕ್‍ಗಳ ಸಂಖ್ಯೆ 27 ರಿಂದ 12 ಕ್ಕೆ ಇಳಿದಿದೆ. ಇದರಿಂದ ಕನ್ನಡಿಗರ ಪಾಲಿನ ಸಾವಿರಾರು ಉದ್ಯೋಗಗಳು ನಷ್ಟವಾದವು. ಹೀಗೆ ನಮ್ಮ ರಾಷ್ಟ್ರೀಕೃತ ಬ್ಯಾಂಕ್‍ಗಳನ್ನು ವಿಲೀನ ಪ್ರಕ್ರಿಯೆ ಮೂಲಕ ಅರ್ಧ ಮುಗಿಸಿ, ಉಳಿದರ್ಧವನ್ನು ಖಾಸಗೀಕರಿಸಲು ಹೊರಟಿದ್ದೀರಿ.

ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್‍ಗಳಿಂದ ಬಂಡವಾಳ ಹಿಂತೆಗೆಯುವುದು ಮತ್ತು ಇವುಗಳನ್ನು ಖಾಸಗಿಯವರಿಗೆ ಮಾರಾಟ ಮಾಡುವುದರಿಂದ ಆಗುವ ಅಡ್ಡ ಪರಿಣಾಮಗಳು ಗೊತ್ತಿದ್ದೂ ಆ ಬಗ್ಗೆ ಜಾಣ ಕುರುಡುತನ ತೋರಿಸುತ್ತಿದೆ. ಸಾವಿರಾರು ಕೋಟಿ ಸಾಲವನ್ನು ದೊಡ್ಡ ಉದ್ಯಮಿಗಳಿಗೆ ಕೊಟ್ಟು ಅವರು ದೇಶ ಬಿಟ್ಟು ಹೋಗುವವರೆಗೂ ಅವರಿಗೆ ಕೆಂಪು ಹಾಸು ಹಾಸುವ ಖಾಸಗಿ ಬ್ಯಾಂಕ್‍ಗಳು ಸಣ್ಣ ಪುಟ್ಟ ಸಾಲಗಾರರನ್ನು ಮಾತ್ರ ಆತ್ಮಹತ್ಯೆಗೆ ದೂಡುತ್ತಿರುವುದನ್ನು ನಾವು ನೋಡುತ್ತಲೇ ಇದ್ದೇವೆ.

ಹಾಗೆಯೇ ಸಾರ್ವಜನಿಕ ವಲಯದ ಬ್ಯಾಂಕ್‍ಗಳನ್ನು ಖಾಸಗಿಯವರಿಗೆ ಒಪ್ಪಿಸುವ ಮೂಲಕ ಹಿಂದುಳಿದ ವರ್ಗಗಳು, ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗಗಳ ಪಾಲಿನ ಉದ್ಯೋಗಾವಕಾಶಗಳನ್ನೂ ಕಿತ್ತುಕೊಳ್ಳಲಾಗುತ್ತಿದೆ. ಜತೆಗೆ ಹಿಂದುಳಿದ ಮತ್ತು ಬಡ ಹಗೂ ದಲಿತ ಸಮುದಾಯಗಳ ಆರ್ಥಿಕ ಚಲನೆಗೆ ಅಡ್ಡವಾಗಿ ದೊಡ್ಡ ಗೋಡೆ ಕಟ್ಟುತ್ತಿದ್ದೀರಿ. ಖಾಸಗಿ ಬ್ಯಾಂಕ್‍ಗಳು ಹೆಚ್ಚೆಚ್ಚು ಲಾಭ ಮಾಡಿಕೊಳ್ಳುವ ಸಲುವಾಗಿ ಡಿಜಟಲ್ ಬ್ಯಾಂಕಿಂಗ್‍ಗೆ ಜಾರುತ್ತಿವೆ. ಇದರಿಂದ ಗ್ರಾಮೀಣ ಭಾಗದ ಆರ್ಥಿಕತೆಗೆ ದೊಡ್ಡ ಪೆಟ್ಟುಕೊಟ್ಟಂತಾಗುತ್ತದೆ. ಸಾಲದ್ದಕ್ಕೆ ಗ್ರಾಮೀಣ ಜನ ಖಾಸಗಿ ಫೈನಾನ್ಸಿಯರ್‍ಗಳ ಹಿಡಿತಕ್ಕೆ ಸಿಕ್ಕಿ ನರಳುವಂತೆ ಮಾಡುತ್ತಿದ್ದೀರಿ. ಆದ್ದರಿಂದ ಸಾರ್ವಜನಿಕ ಬ್ಯಾಂಕ್‍ಗಳ ಖಾಸಗೀಕರಣದ ಹಿಂದೆ ಮೇಲ್ಜಾತಿಗಳ, ಉನ್ನತ ಶ್ರೀಮಂತ ವರ್ಗದ ಮತ್ತು ಕಾರ್ಪೋರೇಟ್ ಶ್ರೀಮಂತರ ಹಿತಾಸಕ್ತಿ ಕಾಯುವ, ಕಾರ್ಪೋರೇಟ್ ವಂಚಕರಿಗೆ ಅನುಕೂಲ ಮಾಡಿಕೊಡುವ ಹುನ್ನಾರ ಅಡಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಎಲ್ಲಾ ಕಾರಣಗಳಿಂದ ಈ ದೇಶದ ದುಡಿಯುವ ವರ್ಗಗಳ ಹಿತಾಸಕ್ತಿಯನ್ನು ಕಡೆಗಣಿಸಿರುವ, ಸಾಮಾಜಿಕ ನ್ಯಾಯ ತತ್ವಕ್ಕೆ ವಿರುದ್ಧವಾಗಿರುವ, ಬಡ ಮತ್ತು ಮಧ್ಯಮ ವರ್ಗದ ಜನ ಸಮಾನ್ಯರ ಬದುಕಿಗೆ ಮಾರಕ ಆಗಿರುವ, ದೇಶದ ಆರ್ಥಿಕತೆಯನ್ನು ನಾಶ ಮಾಡುವಂಥಾ ಬ್ಯಾಂಕ್‍ಗಳ ಖಾಸಗೀಕರಣ ಮತ್ತು ಬಂಡವಾಳ ಹಿಂತೆಗೆತದ ಯೋಜನೆಯನ್ನು ಕೈ ಬಿಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Share Post