ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಿದ ರೈಲ್ವೆ ಇಲಾಖೆ: ಗೊಂದಲ ಸರಿಪಡಿಸಲು ಸಮಿತಿ ರಚನೆ
ದೆಹಲಿ: ರೈಲ್ವೆ ಇಲಾಖೆಯ ನೇಮಕಾತಿಯಲ್ಲಿ ನಡೆಯುತ್ತಿರುವ ಅಕ್ರಮ ಸರಿಪಡಿಸುವಂತೆ ನಿನ್ನೆ ಉದ್ಯೋಗಾಕಾಂಕ್ಷಿಗಳು ಹಿಂಸಾತ್ಮಕ ಪ್ರತಿಭಟನೆ ನಡೆಸಿದ್ರು. ಕೂಡಲೇ ಎಚ್ಚೆತ್ತ ರೈಲ್ವೆ ಇಲಾಖೆ ರೈಲ್ವೇಯಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನಡೆಸಲಾಗುವ ಎಲ್ಲಾ ಪರೀಕ್ಷೆಗಳನ್ನು ಸ್ಥಗಿತಗೊಳಿಸಿದೆ.
ವಿವಿಧ ರೈಲ್ವೇ ನೇಮಕಾತಿ ಮಂಡಳಿಗಳು ನಡೆಸುವ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮತ್ತು ಅನುತ್ತೀರ್ಣರಾದ ಅಭ್ಯರ್ಥಿಗಳು ಎದುರಿಸುತ್ತಿರುವ ತೊಂದರೆಗಳನ್ನು ಪರಿಶೀಲಿಸಲು ರೈಲ್ವೆ ಇಲಾಖೆ ʻಸಮಿತಿʼಯನ್ನು ರಚಿಸಿದೆ. ಅಭ್ಯರ್ಥಿಗಳು ತಮಗಿರುವ ಆಕ್ಷೇಪಣೆಗಳನ್ನು ಸಮಿತಿಗೆ ವರದಿ ನೀಡಲು ಫೆಬ್ರವರಿ 16 ರವರೆಗೂ ಅವಕಾಶ ನೀಡಿದೆ. ಇಬ್ಬರ ವಾದವನ್ನು ಆಲಿಸಿದ ನಂತರ ಸಮಿತಿಯು ತನ್ನ ವರದಿಯನ್ನು ರೈಲ್ವೆ ಸಚಿವಾಲಯಕ್ಕೆ ಸಲ್ಲಿಸಲಿದೆ ಎಂದು ವಕ್ತಾರರು ತಿಳಿಸಿದ್ದಾರೆ.
ಅಲ್ಲಿವರೆಗೂ ಅಭ್ಯರ್ಥಿಗಳು ವಿಧ್ವಂಸಕ ಮತ್ತು ಕಾನೂನುಬಾಹಿರ ಚಟುವಟಿಕೆಗಳಲ್ಲಿ ಭಾಗಿಯಾಗಿರುವುದು ಕಂಡುಬಂದರೆ ನೇಮಕಾತಿ ಮಾಡಿಕೊಳ್ಳದಂತೆ ನಿರ್ಬಂಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.
ರೈಲ್ವೆ ಪರೀಕ್ಷೆಗೆ ಸಂಬಂಧಿಸಿದಂತೆ ನಿನ್ನೆ ಪ್ರಯಾಗ್‌ರಾಜ್‌ನಲ್ಲಿ ನಡೆದ ಗಲಭೆಯಲ್ಲಿ ವಿದ್ಯಾರ್ಥಿಗಳನ್ನು ಥಳಿಸಿದ ಆರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಅಮಾನತು ಘಟನೆಯ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಎಸ್ಪಿ ಹೇಳಿದ್ದಾರೆ. ಏತನ್ಮಧ್ಯೆ ಪಾಟ್ನಾದ ಹಲವು ಕೋಚಿಂಗ್ ಸೆಂಟರ್‌ಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಅಮಾನತುಗೊಂಡಿರುವ ಆರು ಪೊಲೀಸ್ ಸಿಬ್ಬಂದಿಯಲ್ಲಿ ಒಬ್ಬ ಇನ್ಸ್ ಪೆಕ್ಟರ್, ಇಬ್ಬರು ಸಬ್ ಇನ್ಸ್ ಪೆಕ್ಟರ್ ಮತ್ತು ಮೂವರು ಕಾನ್ ಸ್ಟೇಬಲ್ ಗಳು ಸೇರಿದ್ದಾರೆ. ಇವರೆಲ್ಲ ವಿದ್ಯಾರ್ಥಿಗಳಿಗೆ ಅನಗತ್ಯವಾಗಿ ಹೊಡೆದಿದ್ದಾರೆ ಎಂಬ ಆರೋಪವಿದೆ. ಜನವರಿ 24 ರಂದು ವಿದ್ಯಾರ್ಥಿಗಳ ಮೇಲೆ ಲಾಠಿಚಾರ್ಜ್ ನಡೆಸಿದ್ದರಿಂದ ಪ್ರಯಾಗ್ರಾಜ್ ಹಾಗೂ ಪಾಟ್ನಾದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದಿದ್ದರು.