NationalPolitics

ರಾಜ್ಯಸಭಾ ಸದಸ್ಯರ ಅಮಾನತು ಆದೇಶ ಹಿಂಪಡೆಯದಿದ್ದಕ್ಕೆ ಸಭಾತ್ಯಾಗ

ನವದೆಹಲಿ: ದುರ್ವರ್ತನೆ ಹಾಗೂ ಅಶಿಸ್ತು ಪ್ರದರ್ಶಿಸಿದ ಹಿನ್ನೆಲೆಯಲ್ಲಿ 12 ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸಿ ರಾಜ್ಯಸಭಾಧ್ಯಕ್ಷರು ಆದೇಶ ಹೊರಡಿಸಿದ್ದರು. ಈ ಆದೇಶವನ್ನು ಹಿಂಪಡೆಯಲು ರಾಜ್ಯಸಭಾಧ್ಯಕ್ಷ ವೆಂಕಯ್ಯನಾಯ್ಡು ಇಂದು ಒಪ್ಪಿಗೆ ಕೊಟ್ಟಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಪಕ್ಷದ ಸದಸ್ಯರು ರಾಜ್ಯಸಭೆಯಿಂದ ಸಭಾತ್ಯಾಗ ಮಾಡಿದ್ದಾರೆ.


12 ಸದಸ್ಯರ ಮೇಲಿನ ಕ್ರಮ ಸಂಸತ್ತಿಗೆ ವಿರುದ್ಧವಾಗಿದೆ. ಅಮಾನತುಗೊಳಿಸುವ ಮೊದಲು ಸದಸ್ಯರ ಹೆಸರನ್ನು ಹೇಳಬೇಕು. ಅದಾದ ನಂತರವೇ ಅಮಾನತು ಸೂಚನೆ ಹೊರಡಿಸಬೇಕು ಎಂದು ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ವಾದ ಮಾಡಿದರು. ನನ್ನ ವಾದವನ್ನು ಮಂಡಿಸಲು ನನಗೆ ಅವಕಾಶವನ್ನು ನೀಡಲಿಲ್ಲ. ಇದು ಸಂಸತ್ತಿನ ನಡವಳಿಯ ಉಲ್ಲಂಘನೆಯಾಗಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಜ್ಯಸಭಾಧ್ಯಕ್ಷ ವೆಂಕಯ್ಯನಾಯ್ಡು ಅವರು, ಅಮಾನತುಗೊಂಡಿರುವ ಸದಸ್ಯರು ತಮ್ಮ ವರ್ತನೆ ಬಗ್ಗೆ ಪಶ್ಚಾತ್ತಾಪ ವ್ಯಕ್ತಪಡಿಸಲಿಲ್ಲ. ತಮ್ಮ ಕೃತ್ಯವನ್ನು ಸಮರ್ಥಿಸಿಕೊಂಡರು. ಆ ದಿನ ನಡೆದ ಘಟನೆಯಲ್ಲಿ ಸಭಾಧ್ಯಕ್ಷರು ತೆಗೆದುಕೊಂಡ ಕ್ರಮವಲ್ಲ. ಅದು ಮೇಲ್ಮನೆ ತೆಗೆದುಕೊಂಡ ಕ್ರಮ. ಆಗಸ್ಟ್‌ 10ರ ದಾಖಲೆಗಳನ್ನು ಗಮನಿಸಿ. ನಾವು ಸದಸ್ಯರ ಹೆಸರುಗಳನ್ನು ಹೇಳಿದ್ದೇವೆ ಮತ್ತು ತಮ್ಮ ಸ್ಥಾನಗಳಲ್ಲಿ ಕುಳಿತುಕೊಳ್ಳುವಂತೆ ವಿನಂತಿಸಿದ್ದೇವೆ ಎಂದು ಹೇಳಿದರು.
ರಾಜ್ಯಸಭಾಧ್ಯಕ್ಷರ ತೀರ್ಮಾನಕ್ಕೆ ಒಪ್ಪದ ವಿಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿ ಹೊರನಡೆದರು. ಅಮಾನತಾದವರಲ್ಲಿ ಕಾಂಗ್ರೆಸ್‌ನ ಆರು, ಶಿವಸೇನಾ ಮತ್ತು ಟಿಎಂಸಿಯ ತಲಾ ಇಬ್ಬರು, ಸಿಪಿಎಂ ಮತ್ತು ಸಿಪಿಐಯ ತಲಾ ಒಬ್ಬರು ಸಂಸದರಿದ್ದಾರೆ. 12 ಸಂಸದರಲ್ಲಿ ಐವರು ಮಹಿಳೆಯರಿದ್ದಾರೆ.

Share Post