NationalPolitics

ಅಮಿತ್‌ ಶಾ ಭೇಟಿಯಾಗಿ ಧನ್ಯವಾದ ತಿಳಿಸಿದ ರಾಜ್ಯಸಭಾ ಸದಸ್ಯ ಕಾರ್ತಿಕೇಯ ಶರ್ಮಾ

ನವದೆಹಲಿ; ಹರಿಯಾಣದಲ್ಲಿ ಬಿಜೆಪಿ ಬೆಂಬಲದೊಂದಿಗೆ ಪಕ್ಷೇತರರಾಗಿ ಸ್ಪರ್ಧಿಸಿ ರಾಜ್ಯಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿರುವ ಐಟಿವಿ ನೆಟ್‌ವರ್ಕ್‌ ಮುಖ್ಯಸ್ಥರಾದ ಕಾರ್ತಿಕೇಯ ಶರ್ಮಾ ಅವರು, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಧನ್ಯವಾದ ತಿಳಿಸಿದ್ದಾರೆ. ಹರಿಯಾಣ ಸಿಎಂ ಮನೋಹರ್‌ ಲಾಲ್‌ ಅವರೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿದ್ದು, ಈ ವೇಳೆ ನೂತನ ರಾಜ್ಯಸಭಾ ಸದಸ್ಯರಾದ ಕಾರ್ತಿಕೇಯ ಶರ್ಮಾ ಅವರನ್ನು ಅಮಿತ್‌ ಶಾ ಅಭಿನಂದಿಸಿದ್ದಾರೆ.

ಅನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರನ್ನು ಭೇಟಿಯಾದ ಕಾರ್ತಿಕೇಯ ಶರ್ಮಾ ಅವರು ರಾಜ್ಯಸಭಾ ಚುನಾವಣೆಯಲ್ಲಿ ಬೆಂಬಲಿಸಿದ್ದಕ್ಕೆ ಹಾಗೂ ಅಭೂತಪೂರ್ವ ಗೆಲುವಿಗೆ ಕಾರಣವಾಗಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು. ಇದೇ ವೇಳೆ ಮಾತನಾಡಿದ ನೂತನ ರಾಜ್ಯಸಭಾ ಸದಸ್ಯರಾದ ಕಾರ್ತಿಕೇಯ ಶರ್ಮಾ, ನಾನು ರಾಜ್ಯಸಭೆಯಲ್ಲಿ ನನ್ನ ರಾಜ್ಯವನ್ನು ಪ್ರತಿನಿಧಿಸುತ್ತೇನೆ ಮತ್ತು ನನ್ನ ರಾಜ್ಯ ಜನರ ಧ್ವನಿಯಾಗಿರುವುದಕ್ಕೆ ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ ಎಂದು ಹೇಳಿದರು.

ನಾನು ಯುವಜನತೆ, ಶಿಕ್ಷಣ, ಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿನ ಸಮಸ್ಯೆಗಳ ಬಗ್ಗೆ ರಾಜ್ಯಸಭೆಯಲ್ಲಿ ಪ್ರಸ್ತಾಪಿಸುತ್ತೇನೆ ಎಂದು ಕಾರ್ತಿಕೇಯ ಶರ್ಮಾ ಅವರು ಇದೇ ವೇಳೆ ಹೇಳಿದರು. ಇನ್ನು ಕೇಂದ್ರ ಸರ್ಕಾರದ ಜನಪ್ರಿಯ ಯೋಜನೆ ಅಗ್ನಿಪಥ್‌ ಬಗ್ಗೆ ಪ್ರಸ್ತಾಪಿಸಿದ ಅವರು, ಕೇಂದ್ರ ಸರ್ಕಾರ ಸೇನೆಯಲ್ಲಿ ಅಗ್ನಿಪಥ್ ಯೋಜನೆ ಜಾರಿಗೆ ತರುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ದೇಶದ ಯುವಕರು ಹೊಸ ಆಯಾಮಗಳನ್ನು ಪಡೆಯಲಿದ್ದಾರೆ. ಹರಿಯಾಣದಿಂದ ಹೆಚ್ಚಿನ ಸಂಖ್ಯೆಯ ಯುವಕರು ಸೇನೆಗೆ ಹೋಗುತ್ತಾರೆ. ರಾಷ್ಟ್ರೀಯತೆ ಹರಿಯಾಣದ ಯುವಕರ ರಕ್ತದಲ್ಲಿದೆ ಎಂದು ಹೇಳಿದರು. ಇಂತಹ ದೂರಗಾಮಿ ಚಿಂತನೆಗಾಗಿ ಪ್ರಧಾನಿ ಅವರಿಗೆ ಧನ್ಯವಾದ ಹೇಳಬೇಕು. 4 ವರ್ಷಗಳ ಸೇವೆಯ ನಂತರ ಈ ಯುವಕರಿಗೆ ಉದ್ಯೋಗಗಳಲ್ಲಿ ಆದ್ಯತೆ ನೀಡುವ ಹರಿಯಾಣ ಸರ್ಕಾರದ ನಿರ್ಧಾರವೂ ಶ್ಲಾಘನೀಯ. ಹರ್ಯಾಣ ಸರ್ಕಾರವು ಸೇನೆಯ ಉದ್ಯೋಗದ ನಂತರವೂ ಯುವಕರಿಗೆ ಅವಕಾಶಗಳನ್ನು ನೀಡುತ್ತಿದೆ, ಇದು ಉತ್ತಮ ಹೆಜ್ಜೆಯಾಗಿದೆ ಎಂದು ನೂತನ ರಾಜ್ಯಸಭಾ ಸದಸ್ಯರಾದ ಕಾರ್ತಿಕೇಯ ಶರ್ಮಾ ಅವರು ಹರ್ಷ ವ್ಯಕ್ತಪಡಿಸಿದರು.

Share Post