ಉಪಚುನಾವಣೆಯಲ್ಲಿ ಪುಷ್ಕರ್ ಸಿಂಗ್‌ಗೆ ಜಯ; ಉತ್ತರಾಖಂಡ್ ಸಿಎಂ ಹುದ್ದೆ ಭದ್ರ
ಡೆಹ್ರಾಡೂನ್; ಉತ್ತರಾಖಂಡ್ ಸಿಎಂ ಪುಷ್ಕರ್ ಸಿಂಗ್ ದಾಮಿಗೆ ಅವರ ಸೀಟಿಗೆ ಇನ್ನು ಯಾವುದೇ ಚ್ಯುತಿ ಇಲ್ಲ. ಯಾಕಂದ್ರೆ ಉಪಚುನಾವಣೆಯಲ್ಲಿ ಅವರು ಗೆಲುವು ಸಾಧಿಸಿದ್ದಾರೆ. ಚಂಪಾವತ್ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಪುಷ್ಕರ್ ಸಿಂಗ್ ಧಾಮಿ ಅವರು 55,000ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಹೀಗಾಗಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ.
2022ರ ಫೆಬ್ರುವರಿಯಲ್ಲಿ ಉತ್ತರಾಖಂಡ್ ವಿಧಾನಸಭಾ ಚುನಾವಣೆ ನಡೆದಿತ್ತು. ಈ ವೇಳೆ ಖತಿಮಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಧಾಮಿ ಸೋಲನುಭವಿಸಿದ್ದರು. ಆದರೂ ಬಿಜೆಪಿ ಅವರನ್ನೇ ಸಿಎಂ ಮಾಡಿತ್ತು. ಅವರ ಅಧಿಕಾರ ಉಳಿಯಬೇಕಾದರೆ ಆರು ತಿಂಗಳೊಳಗೆ ವಿಧಾನಸಭಾ ಸದಸ್ಯರಾಗಬೇಕಿತ್ತು. ಹೀಗಾಗಿ ಚಂಪಾವತ್‌ನ ಮಾಜಿ ಶಾಸಕ ಕೈಲಾಶ್ ಗೆಹ್‍ತೊರಿ ಅವರು ಕಳೆದ ತಿಂಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಧಾಮಿ ಅವರು ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ಮೇ 31ರಂದು ಮತದಾನ ನಡೆದಿತ್ತು.
ಸಿಎಂ ಪುಷ್ಕರ್ ಸಿಂಗ್ ಧಾಮಿ ವಿರುದ್ಧ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ನಿರ್ಮಲಾ ಹೆಹ್‌ತೊರ್ ಅವರು ತೀವ್ರ ಸ್ಪರ್ಧೆ ನೀಡಿದ್ದರು. ಆದ್ರೆ ಮತದಾರರು ಹಾಲಿ ಸಿಎಂಗೆ ಮಣೆ ಹಾಕಿದ್ದಾರೆ. ಭಾರಿ ಅಂತರದಿಂದ ಗೆಲುವು ಸಾಧಿಸಿದ ದಾಮಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅಭಿನಂದಿಸಿದ್ದಾರೆ.