National

ಕಾಶಿ ವಿಶ್ವೇಶ್ವರನಿಗೆ ಪ್ರಧಾನಿ ನರೇಂದ್ರ ಮೋದಿ ನಮೋ ನಮಃ

ಉತ್ತರಪ್ರದೇಶ: ಮಹತ್ವಕಾಂಕ್ಷೆ ಕಾಶಿ ವಿಶ್ವನಾಥ್‌ ಕಾರಿಡಾರ್‌ ಯೋಜನೆ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಪ್ರದೇಶದ ವಾರಣಾಸಿಗೆ ಭೇಟಿ ನೀಡಿದ್ದಾರೆ. ಕಾರಿಡಾರ್‌ ಯೋಜನೆ ಉದ್ಘಾಟನೆಗೂ ಮುನ್ನ ಮೋದಿ ಪ್ರಸಿದ್ಧ ಕಾಶಿ ವಿಶ್ವೇಶ್ವರನ ದಿವ್ಯ ಸನ್ನಿಧಿಗೆ ಆಗಿಮಿಸಿ ಪೂಜೆ ಸಲ್ಲಿಸಿ, ದರ್ಶನ ಪಡೆದಿದ್ದಾರೆ. ಪ್ರಧಾನಿ ಮೋದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸಾಥ್‌ ನೀಡಿದ್ದಾರೆ. ಉತ್ತರಪ್ರದೇಶ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭೆಯಲ್ಲಿ ಪ್ರತಿನಿಧಿಸುವ ಕ್ಷೇತ್ರವಾಗಿದ್ದು, ಇದಕ್ಕೆ ಹೊಸ ಮೆರುಗನ್ನು ತಂದುಕೊಟ್ಟಿದ್ದಾರೆ. ಕಾಶಿ ಪ್ರಸ್ತುತ ಗತಕಾಲದ ವೈಭವವನ್ನು ಹೊತ್ತು ತಂದಂತಿದೆ. ವಿಶ್ವೇಶ್ವರನ ಸನ್ನಿಧಿ ಪೂರ್ತಿಯಾಗಿ ನವೀಕರಣಗೊಂಡಿದ್ದು, ಎಲ್ಲಾ ಮುಖ್ಯ ದ್ವಾರಗಳು ಭಕ್ತರನ್ನು ಆಕರ್ಷಿಸುತ್ತಿವೆ.

ದೇವಾಲಯದಲ್ಲಿ ಭಕ್ತರಿಗಾಗಿ ಹೊಸ ವಸತಿ ಸಮುಚ್ಚಯಗಳು, ಗ್ರಂಥಾಲಯ, ಅಗತ್ಯವಿರುವ ಎಲ್ಲಾ ಸೌಕರ್ಯಗಳನ್ನು ಮಾಡಲಾಗಿದೆ. ಕಾಶಿ ವಿಶ್ವನಾಥ್‌ ಕಾರಿಡಾರ್ ‌ಉದ್ಘಾಟನೆ ಬಳಿಕ ಇಂದಿನಿಂದ ಒಂದು ತಿಂಗಳ ಕಾಲ ಕಾಶಿಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಸುಮಾರು 339ಕೋಟಿ ವೆಚ್ಚದಲ್ಲಿ 5 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ 23 ಕಟ್ಟಡಗಳನ್ನು ನಿರ್ಮಿಸಲಾಗಿದೆ. ಉದ್ಘಾಟನೆಯಲ್ಲಿ ಸಾಧುಸಂತರು, ರಾಜಕೀಯ ಗಣ್ಯರು, ಹಾಗೂ ಬಿಜೆಪಿ ಸರ್ಕಾರವಿರುವ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಸಂಜೆ 5.30ಕ್ಕೆ ವಿಶ್ವೇಶ್ವರನಿಗೆ ಪ್ರಧಾನಿ ಮೋದಿಯವರು ಗಂಗಾರತಿ ಮತ್ತು ಗಂಗಾಜಲವನ್ನು ಅರ್ಪಿಸಲಿದ್ದಾರೆ.

 

Share Post